ಉಡುಪಿ, ಮಾ 28 (MSP): ಸುವರ್ಣ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.27 ರ ಬುಧವಾರ ಸಂಜೆ ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮದ ಮೂಡು ತಂಗಾಣಬೈಲು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಹಿರಿಯಡ್ಕದ ಬಜೆ ಮೂಡುಕಂಗಣ ನಿವಾಸಿ ಕೃಷ್ಣ ಅವರ ಪತ್ನಿ ಪುಷ್ಪಾ (48) ಮತ್ತು ಮಂಜುನಾಥ್ - ಸುಜಾತ ದಂಪತಿಯ ಪುತ್ರಿ ಅಶ್ವಿನಿ (12) ಮೃತಪಟ್ಟವರು.
ಮೃತಪಟ್ಟ ಪುಷ್ಪಾ ಅವರು ತನ್ನ ಹನ್ನೆರಡು ವರ್ಷದ ಮಗಳು ಐಶ್ವರ್ಯ ಹಾಗೂ ಪಕ್ಕದ ಮನೆಯ ಮಂಜುನಾಥರವರ ಮಗಳು ಅಶ್ವಿನಿ ಅವರೊಂದಿಗೆ ಬಟ್ಟೆ ಒಗೆಯಲೆಂದು ಸಂಜೆ 5.30 ರ ವೇಳೆಗೆ ನದಿಗೆ ಇಳಿದಿದ್ದರು. ಈ ವೇಳೆ ಬಾಲಕಿ ಅಶ್ವಿನಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲೆಂದು ಧಾವಿಸಿದ ಪುಷ್ಪಾ ಕೂಡಾ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪುಷ್ಪಾ ಅವರ ಮಗಳು ಐಶ್ವರ್ಯ ಕಿರುಚಿಕೊಂಡಿದ್ದು, ಸ್ಥಳೀಯ ನಿವಾಸಿಗಳಾದ ಗಣಪ ಹಾಗೂ ಪ್ರಕಾಶ ತಕ್ಷಣ ಧಾವಿಸಿ ಬಂದಿದ್ದು ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪುಷ್ಪಾ ಅವರು ಮಾರ್ಗಮಧ್ಯೆ ಹಾಗೂ ಅಶ್ವಿನಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.