ಮೂಡಬಿದಿರೆ, ಮಾ 26 (SB): ಕೆಲ ದಿನಗಳ ಹಿಂದೆ ದಾಯ್ಜಿವರ್ಲ್ಡ್ ವಾಹಿನಿಯು ಮಂಗಳೂರು ನಗರದ ಕೋಡಿಕ್ಕಲ್ ಎಂಬಲ್ಲಿ ವಾಸವಾಗಿದ್ದ ಅನಾಥ ವಿಕಲಚೇತನ ಸಹೋದರರ ಕರುಣಾ ಜನಕ ವರದಿಯೊಂದನ್ನು ಸವಿಸ್ತಾರವಾಗಿ ಬಿತ್ತರಿಸಿತ್ತು ಹಾಗೂ ಸಂಘ ಸಂಸ್ಥೆಗಳಲ್ಲಿ ಅವರ ಪುನರ್ವಸತಿಯ ಕುರಿತು ವಿನಂತಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದೆ ಮಾಡಿದ ಮಂಗಳೂರಿನ ವೈಟ್ ಡೌವ್ಸ್ ಎಂಬ ಸಂಸ್ಥೆಯು ವಿಕಲಚೇತನ ಸಹೋದರರನ್ನು ರಕ್ಷಿಸಿ ಅವರಿಗೆ ಪುನರ್ವಸತಿಯನ್ನು ಕಲ್ಪಿಸಿತ್ತು.
ಕೋಡಿಕ್ಕಲ್ ಸಹೋದರರ ವರದಿಯ ಹಿಂದೆಯೇ ಇದೀಗ ಮಂಗಳೂರು ಹೊರವಲಯದ ಮೂಡುಬಿದಿರೆಯಲ್ಲಿ ವಾಸವಾಗಿರುವ ಶಾಂತಿ ಎಂಬಾಕೆಯ ಕರುಣಾಜನಕ ಬದುಕು ಬೆಳಕಿಗೆ ಬಂದಿದೆ. ಮೂಡುಬಿದಿರೆ ,ಪಿಲಿಪಂಜರ ಎಂಬಲ್ಲಿ ವಾಸವಾಗಿರುವ ಇಪ್ಪತಾರು ವರ್ಷದ ಶಾಂತಿ ಎಂಬಾಕೆ ಕಳೆದ ಆರು ವರ್ಷಗಳಿಂದ ಕತ್ತಲ ಕೋಣೆಯೊಂದರಲ್ಲಿ ಬಂಧಿಯಾಗಿದ್ದಾಳೆ. ಮೂಲತಃ ತಮಿಳುನಾಡಿನ ನಿವಾಸಿಯಾದ ಧರ್ಮಪಾಲನ್ ಹಾಗೂ ಶಕ್ತಿಕಣಿ ದಂಪತಿಗಳ ಮಗಳಾದ ಶಾಂತಿ ಆರು ವರ್ಷಗಳ ಕಾಲ ಸಾಮಾನ್ಯ ಮಕ್ಕಳಂತೆ ಬೆಳೆದಿದ್ದಳು. ಶಾಲೆ ಸೇರ್ಪಡೆಯಾದ ಬಳಿಕವೂ ಚುರುಕು ಸ್ವಭಾವದವಳಾಗಿಯೇ ವರ್ತಿಸುತ್ತಿದ್ದಳು.
ಆದರೆ ಇದಕ್ಕಿದ್ದಂತೆ ಒಂದು ದಿನ ಶಾಲೆಯಿಂದ ಬಂದ ಬಾಲಕಿ ಶಾಂತಿಯ ನಡತೆಯಲ್ಲಿ ಧಿಡೀರ್ ಬದಲಾವಣೆಯಾಗಿತ್ತು. ಅದೇ ದಿನ ರಾತ್ರಿ ಶಾಂತಿ ಭಯಭೀತಳಂತೆ ಕಿರುಚಾಡಲು ಪ್ರಾರಂಭಿಸಿದರು. ಹೆತ್ತವರು ಸ್ಥಳೀಯ ವೈದ್ಯರನ್ನು ಭೇಟಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆದರೂ ಶಾಂತಿ ಗುಣಮುಖಳಾಗಲಿಲ್ಲ. ಇದೇ ಪರಿಸ್ಥಿತಿ ಮುಂದುವರಿದು ಶಾಂತಿಯ ಮಾನಸಿಕ ಸ್ಥಿತಿ ಸಂಪೂರ್ಣ ಹದಗೆಡಲಾರಂಭಿಸಿತು. ಕಿರುಚಾಟ ,ಮನಸ್ಸಿಗೆ ಬಂದಂತೆ ಓಡುವುದು, ನೆರೆಹೊರೆಯ ಮನೆಯ ಮನೆಗೆ ನುಗ್ಗಿ ಗಾಜು ಕಿಟಕಿ , ಕೈಸಿಕ್ಕ ವಸ್ತುಗಳನ್ನು ಒಡೆದು ಹಾಕುವುದು ಮಾಡತೊಡಗಿದಾಗ, ಬೇರೆ ದಾರಿಕಾರಣದೆ ಆಕೆಯನ್ನು ನಿಯಂತ್ರಿಸುವುದು ಅನಿವಾರ್ಯ ಎಂದು ಹೆತ್ತವರು ಗೃಹಬಂಧನದಲ್ಲಿಟ್ಟಿರು.
ತಮ್ಮ ಮಗಳು ಮಾನಸಿಕ ಆಸ್ವಸ್ಥತೆಯಿಂದ ಗುಣಮುಖ ಹೊಂದಲು ಪೋಷಕರು ಕಾಣದ ವೈದ್ಯರಿಲ್ಲ, ಮೊರೆಹೋಗದ ದೇವರಿಲ್ಲ, ಮಾಡದ ಪೂಜಾ ವಿಧಾನಗಳಿಲ್ಲ. ಆದರೆ ಶಾಂತಿಯ ಕಾಯಿಲೆ ವಾಸಿಯಾಗುವ ಲಕ್ಷಣಗಳು ಗೋಚರಿಸಲಿಲ್ಲ. ಹದಿಹರೆಯಕ್ಕೆ ಬಂದ ಆಕೆ ಶರೀರದಲ್ಲಿ ಬಟ್ಟೆಬರೆಗಳನ್ನು ತೊಡುವುದಕ್ಕೆ ನಿರಾಕರಿಸಲು ಪ್ರಾರಂಭಿಸಿದಳು. ಮನೆಯೊಳಗಿನ ಸಾಮಗ್ರಿಗಳು ನಾಶಮಾಡುವುದು, ಬೆಂಕಿಯೊಂದಿಗೆ ಸರಸವಾಡುವುದು ನಿತ್ಯದ ಕಥೆಯಾಯಿತು. ಕೊನೆಗೆ ಬೇರೆ ಗತ್ಯಂತರವಿಲ್ಲದೆ ಧರ್ಮಪಾಲನ್ ದಂಪತಿಗಳು ಆಕೆಯನ್ನು ಅನಿವಾರ್ಯವಾಗಿ ಕತ್ತಲ ಕೋಣೆಯೊಳಗೆ ಬಂಧಿಯಾಗಿರಿಸಿದ್ದಾರೆ.
"ಕಳೆದ ಆರು ವರ್ಷಗಳಿಂದ ಮಗಳು ಕತ್ತಲ ಕೋಣೆಯಲ್ಲಿರಿಸಿದ್ದೇವೆ. ಕೊಠಡಿಯ ಬಾಗಿಲು ತೆರೆಯುವಂತಿಲ್ಲ. ಬೆಳಕು ಕಂಡ ತಕ್ಷಣ ಆಕೆ ಕಿರುಚಾಡಲು ಆರಂಭಿಸುತ್ತಾಳೆ. ಕೋಣೆಯ ಬಾಗಿಲು ತೆರೆದರೆ ನಗ್ನಳಾಗಿ ಹೊರ ಓಡುತ್ತಾಳೆ ಹಾಗೂ ನೆರೆ ಮನೆಗಳ ಮೇಲೆ ಕಲ್ಲೆಸೆಯುವಲ್ಲಿ ತೊಡಗುತ್ತಾಳೆ. ಆಕೆಯನ್ನು ಹಿಡಿದು ಪುನಃ ಕೋಣೆಗೆ ತರಲು ಹರ ಸಾಹಸಪಡಬೇಕಾಗುತ್ತದೆ. ಆದುದರಿಂದ ಯಾವುದೇ ಕಾರಣಕ್ಕೆ ನಾವು ಆಕೆಯನ್ನು ಕೂಡಿಟ್ಟ ಕೋಣೆಯನ್ನು ತೆರೆಯುವುದಿಲ್ಲ. ಆಕೆಗೆ ಆಹಾರವನ್ನು ಕಿಟಕಿಯ ಮೂಲಕ ನೀಡುತ್ತೇವೆ. ಮಲ ಮೂತ್ರ ವಿಸರ್ಜನೆ ಕೋಣೆಯಲ್ಲೇ ನಡೆಯುತ್ತೆ. ವಾರಕ್ಕೊಮ್ಮೆ ನೆರೆಯ ಮಹಿಳೆಯರ ಸಹಕಾರದೊಂದಿಗೆ ನನ್ನ ಪತ್ನಿ ಶಾಂತಿಯ ಕೋಣೆಯನ್ನು ಅಲ್ಪ ಸಲ್ಪ ಶುಚಿಗೊಳಿಸುತ್ತಾಳೆ. ಆದರೆ ದುರಾದೃಷ್ಟ ನೋಡಿ ನನ್ನ ಪತ್ನಿ ಕ್ಯಾನ್ಸರ್ ಪೀಡಿತೆಯಾಗಿ ಕಳೆದ ಹದಿನೈದು ದಿನಗಳಿಂದ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳ ಪಾಲನೆ ಪೋಷಣೆ ನಡೆಸುವವರು ಈಗ ಇಲ್ಲಾದಾಗಿದೆ " ಎಂದು ಶಾಂತಿಯನ್ನು ಬಂಧಿಯಾಗಿರಿಸಿದ ಕೋಣೆಯನ್ನು ತೋರಿಸುತ್ತಾ ಗಬ್ಬು ವಾಸನೆ ತಡೆಯಲಾಗದೆ ಮೂಗು ಮುಚ್ಚಿಕೊಂಡು ಧರ್ಮಪಾಲನ್ ತನ್ನ ದಯನೀಯ ಸ್ಥಿತಿಯನ್ನು ವಿವರಿಸುತ್ತಾರೆ.
ಶಾಂತಿಯ ಕರುಳು ಕಿತ್ತು ಬರುವ ಕಥೆಯನ್ನು ದಾಯ್ಜಿವರ್ಲ್ಡ್ ಗೆ ತಿಳಿಸಿದ ಸ್ಥಳೀಯ ಶಿಕ್ಷಿಕಿ ಗ್ಲೆಂಡಾ ನಿಶಾ ಪ್ರಕಾರ ಸರಿಯಾದ ಚಿಕಿತ್ಸೆ ದೊರೆತರೆ ಶಾಂತಿ ಗುಣಮುಖಳಾಗಲು ಸಾಧ್ಯವಿದೆ. ಬಾಲ್ಯದಲ್ಲಿ ಉಂಟಾದ ಯಾವುದೋ ಮಾನಸಿಕ ಆಘಾತ ಶಾಂತಿಯನ್ನು ಮಾನಸಿಕ ಅಸ್ವಸ್ಥೆಯನ್ನಾಗಿಸಿದೆ. ಮನೆಯಲ್ಲಿನ ಕಡುಬಡತನ ಹಾಗೂ ಹೆತ್ತವರಿಗಿರುವ ಚಿಕಿತ್ಸಾ ವಿಧಾನಗಳ ಅರಿವಿನ ಕೊರತೆ ಆಕೆಯ ಬದುಕನ್ನು ಶೋಚನಿಯವನ್ನಾಗಿಸಿದೆ ಎನ್ನುತ್ತಾರೆ.
ವರದಿಗೆಂದು ದಾಯ್ಜಿವರ್ಲ್ಡ್ ತಂಡ ಶಾಂತಿಯ ಮನೆಗೆ ಭೇಟಿ ಕೊಟ್ಟಾಗ ಸ್ಥಳೀಯರು ದೊಡ್ಡ ಸಂಖೆಯಲ್ಲಿ ಹಾಜರಿದ್ದು ಶಾಂತಿಯ ಕುಟುಂಬದ ಶೋಚನೀಯವಸ್ಥೆಯನ್ನು ವಿವರಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶಾಂತಿಯ ಬಗ್ಗೆ ತಿಳಿಸಿ ಸಹಾಯ ಯಾಚಿಸಿದರೂ ಯಾರೂ ಅತ್ತ ಕಡೆ ಕಣ್ಣೆತ್ತಿ ನೋಡಲಿಲ್ಲ ಎಂದು ಆರೋಪಿಸುತ್ತಾರೆ.
ಇದೀಗ ಶಾಂತಿಗೆ ಕತ್ತಲ ಕೋಣೆಯಿಂದ ಮುಕ್ತಿ ದೊರಕಬೇಕಾಗಿದೆ. ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗಿದೆ. ಮಗಳು ಇಂದಲ್ಲ ನಾಳೆ ಗುಣಮುಖಳಾಗಬಹುದು ಎಂಬ ಆಶಾಭಾವನೆಯೊಂದಿಗೆ, ಸೂಕ್ತ ಚಿಕಿತ್ಸೆ ನೀಡಲು ಧರ್ಮಪಾಲನ್ ದಂಪತಿಗಳು ಸಂಘ ಸಂಸ್ಥೆಗಳ, ಸರಕಾರಿ ಸಂವಿಧಾನಗಳ ನೆರವಿಗಾಗಿ ಕಾಯುತ್ತಿದ್ದಾರೆ.