ಉಡುಪಿ, ಮಾ 28(SM): ನಾಪತ್ತೆಯಾಗಿರುವ ಒಂದು ಮೀನುಗಾರಿಕಾ ಬೋಟನ್ನು ಹುಡುಕಲಾಗದವರು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರನ್ನು ಹುಡುಕುತ್ತಾರಾ ಎಂದು ಕೇಂದ್ರ ಸರಕಾರದ ವಿರುದ್ಧ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಅವರು ಮಾರ್ಚ್ 28ರ ಗುರುವಾರದಂದು ಬ್ರಹ್ಮಾವರದಲ್ಲಿ ನಡೆದ ಬ್ಲಾಕ್ ಮಟ್ಟದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮೀನುಗಾರರು ನಾಪತ್ತೆಯಾದ ದಿನ ಒಂದು ನೇವಿ ಶಿಪ್ ಮುಂಬೈಯಿಂದ ಕೊಚ್ಚಿಗೆ ಹೋಗಿದೆ. ಆ ಶಿಪ್ಗೆ ನೀರಿನಿಂದ 18 ಅಡಿ ಎತ್ತರದಲ್ಲಿ ಹಾನಿಯಾಗಿರುವ ಸುದ್ದಿ ಇದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಶೋಭಾ ಕರಂದ್ಲಾಜೆ ಮೀನುಗಾರರ ಮನೆಗೆ ಭೇಟಿ ನೀಡಿರುವುದು ನನಗೆ ಸಂದೇಹ ಮೂಡಿದೆ. ನೇವಿ ಶಿಪ್ಗೆ ನಮ್ಮ ಮೀನುಗಾರರ ಬೋಟ್ ಆಕ್ಸಿಡೆಂಟ್ ಆಗಿದೆಯೇ ಅಥವಾ ಏನಾಗಿದೆ ಎಂಬ ಸತ್ಯವನ್ನು ಜನರ ಮುಂದಿಡಿ. ಇಲ್ಲವಾದಲ್ಲಿ ಮೀನುಗಾರರನ್ನು ಹುಡುಕಿಕೊಡಿ ಎಂದು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮೋದಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನ್ನಲ್ಲಿ ನೀವು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಕೇಳಿಕೊಂಡಾಗ ಕಾಂಗ್ರೆಸ್ ಮುಖಂಡರ ಒಪ್ಪಿಗೆ ಪಡೆದು ಸ್ಪರ್ಧಿಸುವ ಭರವಸೆ ನೀಡಿದೆ. ಒಂದು ವೇಳೆ ನಾನು ಸ್ಪರ್ಧಿಸದೇ ಇದ್ದಲ್ಲಿ ಜೆಡಿಎಸ್ ಚಿಹ್ನೆ ಹಾಗೂ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸಿದಲ್ಲಿ ನಮ್ಮ ಕಾರ್ಯಕರ್ತರು ಛಿದ್ರ ಛಿದ್ರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ತೊಂದರೆಯಾಗಬಾರದೆಂದು ಭಾವಿಸಿ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಸ್ಪರ್ಧಿಸಿದ್ದೇನೆ. ಗೆದ್ದು ಬಂದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸೇವಕನಾಗಿ ದುಡಿಯಲಿದ್ದೇನೆ. ಬೇರೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಎಣ್ಣೆ ಮತ್ತು ನೀರಿನಂತೆ ಇರಬಹುದು. ಆದರೆ ನಮ್ಮಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಚಿಹ್ನೆ ಹಾಲು ಜೇನಿನಂತೆ ಮಿಶ್ರಣವಾಗಿದೆ. ನಾನು ಶಾಸಕನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದನ್ನು ನೀವು ಕಂಡಿದ್ದೀರಿ. ನಾನು ಗೆದ್ದು ಬಂದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕನಾಗಿ ದುಡಿಯಲಿದ್ದೇನೆ ಎಂದರು.
ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅನುದಾನ ಇದೆ. ಕೇಂದ್ರ ಸರ್ಕಾರದ ಅನುದಾನಗಳನ್ನು ಕ್ಷೇತ್ರದಾದ್ಯಂತ ತಂದು ಅಭಿವೃದ್ಧಿ ಮಾಡಲಿದ್ದೇನೆ. ನಾನು ಶಾಸಕನಾಗಿ ಕೆಲಸ ಮಾಡಿ ಸೋತಿದ್ದೇನೆ. ಆದ್ದರಿಂದ ನನಗೆ ಬೇಸರವಿಲ್ಲ. ಪ್ರಥಮ ಬಾರಿಗೆ ಶಾಸಕನಾದ ಮೇಲೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾದೆ, ಸಹಾಯಕ ಮಂತ್ರಿಯಾದೆ, ಕ್ಯಾಬಿನೆಟ್ ಮಂತ್ರಿಯಾದೆ. ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿ ಶಾಸಕನಾದ ವ್ಯಕ್ತಿಗೆ ಮೂರು ಬಾರಿ ಪ್ರಮೋಷನ್ ಸಿಕ್ಕಿದ್ದು ಪ್ರಮೋದ್ ಮಧ್ವರಾಜ್ಗೆ ಮಾತ್ರ ಎಂದರು.