ಮಂಗಳೂರು, ಮಾ 28(SM): ಅಂತರ್ಜಾಲ ಮುಖೇನ ಉಳ್ಳಾಲ ಮೂಲದ ಮಹಿಳೆಯನ್ನು ಸಂಪರ್ಕಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪಿಗಳಿಗೆ ಮಂಗಳೂರು ಜೆಎಂಎಫ್ ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರು ಒಂದು ವರ್ಷ 9 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಮೂಲತ: ಮಿಝೋರಂ ಮತ್ತು ಮಣಿಪುರ ಮೂಲದ ನವದೆಹಲಿಯ ವಿಕಾಸಪುರಿಯಲ್ಲಿದ್ದ ಲಾಲ್ತಾನ್ ಮಾವಿಯಾ(36) ಮತ್ತು ಕೂಬೋಯಿ ಯಾನೆ ಲಿಯಾನ್ ಕೂಪ್(33) ಎಂಬವರು ಆರೋಪಿಗಳಾಗಿದ್ದು ಇದೀಗ ಶಿಕ್ಷೆಗೆ ಗುರಿಯಾಗಿದ್ದಾರೆ. 2017ರ ಮೇ.9 ರಂದು ಆರೋಪಿಗಳು ಮೋಸ ಮಾಡುವ ಉದ್ದೇಶದಿಂದ ಉಳ್ಳಾಲ ಠಾಣಾ ವ್ಯಾಪ್ತಿಯ ವಾಯ್ಲೆಟ್ ಡಿಸೋಜ ಎಂಬವರ ಸ್ನೇಹಿತ ಲಂಡನ್ನಿನಲ್ಲಿರುವ ಗುಡ್ಸನ್ ವಿಲ್ಫ್ರೆಡ್ ಅವರ ಹೆಸರಿನ ಮೂಲಕ ಸಂಪರ್ಕಿಸಿ ನಟಿಸಿ, ಪಾರ್ಸೆಲ್ ಮೂಲಕ 28,000 ಪೌಂಡ್ ಫಾರಿನ್ ಕರೆನ್ಸಿ ಮತ್ತು ಗಿಫ್ಟ್ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದ್ದರು.
ಇದನ್ನು ಪಡೆದುಕೊಳ್ಳಲು ಕಸ್ಟಮ್ಸ್ ಕ್ಲಿಯರೆನ್ಸ್ ಗಾಗಿ ನಂಬಿಸಿ ಹಣ ನೀಡಬೇಕೆಂದು ವಾಯ್ಲೆಟ್ ಅವರಿಂದ 21,58,200 ರೂಪಾಯಿಗಳನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ಮೋಸ ಮಾಡಿದ್ದರು. 2017ರ, ಮಾ.31 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್. ನೇತೃತ್ವದ ತಂಡ 2017ರ ಜೂ.6 ರಂದು ನವದೆಹಲಿಯಿಂದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ಬಂಧಿಸಲಾಗಿದ್ದು, ಜಾಮೀನು ಸಿಗದೇ ಜೈಲಿನಲ್ಲೇ ಇದ್ದರು.
ಇದೀಗ ನ್ಯಾಯಾಧೀಶರು ಹೊರಡಿಸಿರುವ ಆದೇಶದಂತೆ ಮತ್ತೆ ಆರೋಪಿಗಳು ಜೈಲುಪಾಲಾಗಿದ್ದಾರೆ.