ಕಟಪಾಡಿ, ಮಾ29(SS): 5 ವರ್ಷದಲ್ಲಿ ಕನಿಷ್ಠ 5 ದಿನವನ್ನೂ ಕ್ಷೇತ್ರಕ್ಕಾಗಿ ವಿನಿಯೋಗಿಸದ ಅವರು ಒಬ್ಬ ಪಂಚಾಯಿತಿ ಸದಸ್ಯ ಮಾಡುವಷ್ಟು ಕೆಲಸ ಮಾಡಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಕಾಪುವಿನಲ್ಲಿ ನಡೆದ ಉಭಯ ಪಕ್ಷಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಸಂಸದೆಯಾಗಿ ತಮ್ಮ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸುವ ಮೂಲಕ 5 ವರ್ಷ ವ್ಯರ್ಥಗೊಳಿಸಿದ್ದಾರೆ. ಕ್ಷೇತ್ರದ ಹೊರಗಿನಿಂದ ಬಂದಿರುವ ಅವರಿಗೆ ತನ್ನ ಕ್ಷೇತ್ರದ ಮಣ್ಣಿನ ತುಡಿತವಿಲ್ಲದ ಕಾರಣ ಇಲ್ಲಿನ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.
ಶೋಭಾ ಎರಡನೇ ಭಾರಿಗೆ ನಾಮಪತ್ರ ಸಲ್ಲಿಸುವಾಗಲೂ ಬೆಂಗಳೂರಿನ ವಿಳಾಸವನ್ನೇ ನಮೂದಿಸಿದ್ದಾರೆ. ಇಲ್ಲಿನ ಜನರಿಂದ ಆಯ್ಕೆಯಾದ ಅವರಿಗೆ, ಈ ಜನರ ನಡುವೆ ಇರಬೇಕು ಎಂಬ ಕನಿಷ್ಠ ಕಾಳಜಿಯೂ ಇಲ್ಲ. ಆಕೆ ಸೀಟಿಗಾಗಿ ಯಡಿಯೂರಪ್ಪ ಮತ್ತು ಓಟಿಗಾಗಿ ಮೋದಿ ಎಂಬ ಸೂತ್ರ ಅವಲಂಬಿಸಿಕೊಂಡು ಮತ್ತೆ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ವಿನಯ ಕುಮಾರ್ ಸೊರಕೆ, ಕಳೆದ ಬಾರಿ ನಾವು ಅತಿ ಆತ್ಮವಿಶ್ವಾಸದ ಕಾರಣಕ್ಕೆ ಸೋತೆವು. ಆ ತಪ್ಪು ಮತ್ತೆ ಮಾಡುವುದು ಬೇಡ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದ್ದು ತಳಮಟ್ಟದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.