ಉಡುಪಿ, ಮಾ29(SS): ಒಂದು ಮರದಿಂದ ಮತ್ತಂದು ಮರಕ್ಕೆ ನೆಗೆಯುವ ಅಪರೂಪದ 'ಗೋಲ್ಡನ್ ಟ್ರೀ ಸ್ನೇಕ್' ಮಲ್ಪೆಯ ತರಕಾರಿ ಅಂಗಡಿಯೊಂದರಲ್ಲಿ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಮಲ್ಪೆಯ ತರಕಾರಿ ಅಂಗಡಿಯಲ್ಲಿ ಕಂಡುಬಂದ ಈ ಅಪರಿಚಿತ ಹಾವನ್ನು, ಹಾವು ಹಿಡಿಯುವ ಬಾಬು ಕೊಳ ಹಿಡಿದು ಉಡುಪಿಯ ಪ್ರಸಿದ್ಧ ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸನಿಲ್ ಈ ಹಾವನ್ನು ಪರಿಶೀಲಿಸಿದಾಗ ಇದು ಅಪರೂಪದ ಗೋಲ್ಡನ್ ಟ್ರೀ ಸ್ನೇಕ್ ಎಂದು ತಿಳಿಸಿದ್ದಾರೆ.
ಗೋಲ್ಡನ್ ಟ್ರೀ ಸ್ನೇಕ್ ಅಪರೂಪದ ಹಾವಾಗಿದ್ದು ಹೆಚ್ಚಾಗಿ ಇದು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮಾತ್ರವಲ್ಲ, ಇದು ವಿಷರಹಿತ ಹಾವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉರಗ ತಜ್ಞ ಗುರುರಾಜ್ ಸನಿಲ್, ಈ ಹಾವು ಕರಾವಳಿಯ ಮಲ್ಪೆ ಮೊದಲಾದ ಪರಿಸರಗಳಲ್ಲಿ ಕಂಡು ಬರುವುದು ಅಪರೂಪ. ಯಾಕೆಂದರೆ ಇವುಗಳು ವೃಕ್ಷವಾಸಿಗಳು. ಹೀಗಾಗಿ ಇದು ಘಟ್ಟದ ಮೇಲಿನಿಂದ ತರಕಾರಿ ವಾಹನ ಕೆಳಗಿಳಿಯುವಾಗ ಮರದಿಂದ ಮರಕ್ಕೆ ನೆಗೆಯುವ ಸಂದರ್ಭ ವಾಹನವನ್ನು ಸೇರಿರಬಹುದು. ಹಾಗೆಯೇ ತರಕಾರಿ ಬುಟ್ಟಿಯೊಳಗೆ ತೂರಿ, ಅಂಗಡಿಯನ್ನು ತಲುಪಿರಬಹುದು ಎಂದು ಊಹಿಸಿದ್ದಾರೆ.