ತಲಪಾಡಿ, ಮಾ29(SS): ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ (ಬಂಗಾರಣ್ಣೆರ್) ಮಾತೆ ದುರ್ಗೆಯ ಪವಿತ್ರ ದಿನವಾದ ಶುಕ್ರವಾರದಂದೇ ದೇವರ ಪಾದ ಸೇರಿದ್ದಾರೆ.
ತಲಪಾಡಿಯ ದೇವಿಪುರದಲ್ಲಿ ವಿರಾಜಿಸುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಬಾಲಕೃಷ್ಣ ಭಟ್ ಪಂಜಾಳ ಆಚಾರ ಸಂಪನ್ನತೆ, ವೈದಿಕ ವಿದ್ಯೆ, ಆಯುರ್ವೇದ ಪಾಂಡಿತ್ಯ ಮತ್ತು ಪರಮ ದೈವ ಭಕ್ತಿಯಿಂದ ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದರು. ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಲವಾರು ವರುಷಗಳಿಂದ ಪ್ರಧಾನ ಅರ್ಚಕರಾಗಿ ಮಾತೆ ದುರ್ಗೆಯ ಸೇವೆಯನ್ನು ಮಾಡಿ ಅವಧೂತ, ಸಜ್ಜನಿಕೆಯ ಸಕಾರ ಮೂರ್ತಿ ಎನಿಸಿಕೊಂಡಿದ್ದರು.
ತಲಪಾಡಿಯಲ್ಲಿ ಬಾಲಕೃಷ್ಣ ಭಟ್ ಪಂಜಾಳ ಅವರು ಬಂಗಾರ್ ಅಣ್ಣೆರ್ ಎಂದೇ ಪ್ರಸಿದ್ಧಿ ಪಡೆದಿದ್ದರು. ಜನ ಅವರನ್ನು ಭಕ್ತಿ ಪ್ರೀತಿಯಿಂದ ಬಂಗಾರ್ ಅಣ್ಣೆರ್ ಎಂದು ಕರೆಯುತ್ತಿದ್ದರು. ಮಾತ್ರವಲ್ಲ, ತಲಪಾಡಿಯ ಸಂತ ಎಂಬುವುದಾಗಿಯೂ ಬಾಲಕೃಷ್ಣ ಭಟ್ ಪಂಜಾಳ ಪ್ರಸಿದ್ಧಿ ಪಡೆದಿದ್ದರು.
ಬಾಲಕೃಷ್ಣ ಭಟ್ ಪಂಜಾಳ ಸಂಸ್ಕೃತ ವಿದ್ಯಾಭ್ಯಾಸದಲ್ಲಿ ಪಾಂಡಿತ್ಯ ಪಡೆದಿದ್ದು, ಕಣ್ವತೀರ್ಥ ಮಠದಲ್ಲಿ ಸುಬ್ರಾಯ ಪಡ್ಡಿಲ್ಲಾಯರ ಶಿಷ್ಯತ್ವದಲ್ಲಿ ಪವಿತ್ರ ಪುರೋಹಿತ ವಿದ್ಯಾಭ್ಯಾಸ ಪಡೆದುಕೊಂಡವರು. ಮಾತ್ರವಲ್ಲ, ಮಂಗಳೂರಿನ ರಾಮಕೃಷ್ಣ ಧರ್ಮ ವೈದ್ಯಾಶ್ರಮದಲ್ಲಿ 2 ವರುಷ ಆಯುರ್ವೇದ ವಿಚಾರದಲ್ಲಿ ವ್ಯಾಸಂಗ ಮಾಡಿ ಆಯುರ್ವೇದ ಭಿಷಕ್ ಎಂಬ ಪದವಿಯನ್ನು ಪಡೆದುಕೊಂಡಿದ್ದಾರೆ. ಸ್ತ್ರೀ ಸಂಬಂಧಿತ ರೋಗಗಳು ಸೇರಿದಂತೆ, ವಾತ ಗಂಟು ಮತ್ತು ಕೀಲು ನೋವುಗಳಿಗೆ ಬಾಲಕೃಷ್ಣ ಭಟ್ ಪಂಜಾಳ ಅವರ ಔಷಧಿ ರಾಮಬಾಣದಂತಿತ್ತು.
1959ರಲ್ಲಿ ಜಯಲಕ್ಷ್ಮೀ ಎಂಬವರನ್ನು ವಿವಾಹವಾಗಿದ್ದ ಬಾಲಕೃಷ್ಣ ಭಟ್ ಪಂಜಾಳ ಪತ್ನಿ ಸೇರಿದಂತೆ 6 ಮಂದಿ ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ ಅವರ ಸಾವು ತಲಪಾಡಿಯ ಜನತೆಗೆ ಅಪಾರ ನೋವು ತಂದಿದೆ. ಯಾವುದೇ ಸಂದರ್ಭದಲ್ಲೂ ಸಲಹೆ, ಸೂಚನೆ ನೀಡುತ್ತಿದ್ದ ಇವರು ದೂರವಾಗಿದ್ದು, ವೈಯಕ್ತಿಕವಾಗಿ ತುಂಬಲಾರದ ನಷ್ಟವನ್ನುಂಟು ಮಾಡಿದೆ.