ಉಡುಪಿ,ಮಾ 29 (MSP): ಉಡುಪಿಯ ಪ್ರತಿಷ್ಠಿತ ಕಾಲೇಜೊಂದರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ಉಡುಪಿ ಮಠದ ಪರಿಸರ ಸುಖೀಲ್ (17) ಎಂದು ಗುರುತಿಸಲಾಗಿದೆ. ಈತ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು, ವಿದ್ಯಾರ್ಥಿಯು ಮೂಲತ: ತಮಿಳುನಾಡಿನ ಮೂಲದವನಾಗಿದ್ದಾನೆ.
ವಿದ್ಯಾರ್ಥಿ ತಂದೆ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದು ಇಂದ್ರಾಳಿ ಬಳಿ ರೈಲ್ವೆ ವಸತಿ ಗೃಹದಲ್ಲಿ ವಾಸವಾಗಿದ್ದಾರೆ. ದ್ವಿತೀಯ ಪಿಯುಸಿಯ ಕೇವಲ ಎರಡು ಪರೀಕ್ಷೆ ಬರೆದ ಈತ, ಬಳಿಕ ನಿಗೂಢವಾಗಿ ಕಾಣೆಯಾಗಿದ್ದು ಮಠದ ಪರಿಸರದಲ್ಲಿ ಹಲವಾರು ಊಹಾಪೊಹಗಳಿಗೆ ಕಾರಣವಾಗಿದೆ.
ಈ ಹಿಂದೆ ಪೂರ್ವ ತಯಾರಿ ಪರೀಕ್ಷೆಯ ವೇಳೆಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಗೆ, ಬೇರೆ ವಿದ್ಯಾರ್ಥಿಗಳ ಗಣಿತ ಉತ್ತರ ಪತ್ರಿಕೆಯನ್ನು ಕಾಲೇಜಿನ ಉಪನ್ಯಾಸಕಿಯೊಬ್ಬರು ನಕಲು ಮಾಡಲು ನೀಡಿದ್ದರು. ಇದನ್ನು ತಿಳಿದ ಕಾಲೇಜಿನ ಇತರ ಇಬ್ಬರು ಉಪನ್ಯಾಸಕರು, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ರೋಸಿ ಹೋದ ಉಪನ್ಯಾಸಕಿ, ಇಬ್ಬರು ಉಪನ್ಯಾಸಕರ ವಿರುದ್ದ ಕಾಲೇಜಿನ ಆಡಳಿತ ಮಂಡಳಿಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಕಾಲೇಜು ಆಡಳಿತ ಮಂಡಳಿ ಮೂವರನ್ನು ವಜಾಗೊಳಿಸಿತ್ತು ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಿದ್ಯಾರ್ಥಿ ಧಿಡೀರ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಗೆ ಕಾರಣವಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ