ಕಾರ್ಕಳ,ಮಾ 29 (MSP): ಈಗೇನಿದ್ದರೂ ಮಷಿನ್ ಭರಾಟೆ. ನೀರಿಗೂ ಅಷ್ಟೇ, ಬಾವಿಯಲ್ಲಿ ನೀರು ಸಿಗುತ್ತೋ ಇಲ್ಲವೋ ಎನ್ನುವ ಅನುಮಾನದಿಂದ ಭಾರೀ ಗಾತ್ರದ ಯಂತ್ರಗಳ ಮೂಲಕ ಬೋರ್ವೆಲ್ ಕೊರೆಸುವ ಕಾಲಘಟ್ಟ ಇದು. ಇದಕ್ಕೆ ವಿರೋಧ ಎಂಬಂತೆ ಇಲ್ಲೊಬ್ಬ ಆಧುನಿಕ ಭಗೀರಥನಿದ್ದಾನೆ. ಒನ್ ಮ್ಯಾನ್ ಆರ್ಮಿಯಂತೆ ಕೆಲಸ ಮಾಡಿ ಏಕಾಂಗಿಯಾಗಿ ಬಾವಿ ಕೊರೆದು ಎಲ್ಲರನ್ನು ಅಚ್ಚರಿಗೀಡು ಮಾಡಿದ್ದಾರೆ.
ಇವರೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯ ಭುವನೇಶ ಗೌಡ. ವಯಸ್ಸು 32, ಛಲವಾದಿ. ದಿನನಿತ್ಯ ಕೂಲಿ ಕೆಲಸ ಮಾಡಿ ಬರುವ ಭುವನೇಶ್ ಸುಸ್ತಾದರೂ ಛಲ ಬಿಡದೆ ಪ್ರತೀ ದಿನ ಮಣ್ಣು ಅಗೆದು ಬಾವಿಯಲ್ಲಿ ನೀರು ಉಕ್ಕುವಂತೆ ಮಾಡಿದ್ದಾರೆ.
ಸಾಮಾನ್ಯವಾಗಿ ಬಾವಿ ಕೆಲಸಕ್ಕೆ ಸುಮಾರು 5 ರಿಂದ 6 ಮಂದಿ ಕಾರ್ಮಿಕರು ಅಗತ್ಯವಿದೆ. ಆದರೆ ದಿನಂಪ್ರತಿ ಹಗಲಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡಿ ಹಿಂತಿರುಗಿದ ಬಳಿಕ ತನ್ನ 5 ಸೆಂಟ್ಸ್ ಜಾಗದಲ್ಲಿ ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಶ್ರಮವಹಿಸಿ ಕೆಲಸ ಮಾಡಿ ಸ್ವಲ್ಪ ಸ್ವಲ್ಪವೇ ಮಣ್ಣು ಅಗೆದು ಒಟ್ಟು 18 ಅಡಿ ಬಾವಿ ತೋಡಿ ಎರಡು ಅಡಿ ನೀರು ಪಡೆದಿದ್ದಾರೆ. ಒಮ್ಮೆಮ್ಮೊ ಕ್ಯಾಂಡಲ್ ಹಿಡಿದು ಬಾವಿ ತೋಡಿದ್ದು ಇದೆ. ತಾನು ಬೆವರಧಾರೆ ಹಾರಿಸಿ ದೊರೆತ ನೀರು ತನಗಾಗಿ ಮಾತ್ರ ಅಂದುಕೊಳ್ಳದೆ ಪಕ್ಕದ ಮೂರು ಮನೆಗಳಿಗೂ ನೀರು ನೀಡಿ ಸಹಾಯ ಮಾಡುತ್ತಿದ್ದಾರೆ
ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ಭುವನೇಶ ಗೌಡ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾವಂಜಿಗುಡ್ಡೆ ಎಂಬಲ್ಲಿ ವಾಸಿಸುತ್ತಿದ್ದಾರೆ. ಈ ಪರಿಸರದಲ್ಲಿ ಸರ್ಕಾರಿ ಸೈಟುಗಳ ಜನರೂ ನೀರಿಲ್ಲದೆ ತೊಂದರೆ ಅನುಭವಿಸಿ ಜಾಗ ಮಾರಾಟ ಮಾಡಲಾರಂಭಿಸಿದಾಗ ಭುವನೇಶ ಒಂದು ಸೈಟು ಖರೀದಿಸಿ ನೀರಿಗಾಗಿ ಭಗೀರಥ ಪ್ರಯತ್ನ ಮಾಡಿ ಯಶ ಕಂಡಿದ್ದಾರೆ. ಇದೀಗ ಇವರ ಸಾಧನೆಗೆ ಸಾರ್ವಜನಿಕರು ಬೇಷ್ ಅನ್ನುತ್ತಿದ್ದಾರೆ.