ಮಂಗಳೂರು, ಮಾ29(SS): ಪಂಪ್ವೆಲ್ ಪ್ಲೈಓವರ್ ಸೇರಿದಂತೆ ಹಲವು ವೈಫಲ್ಯಗಳೇ ಸಂಸದ ನಳಿನ್ ಅವರ ಸಾಧನೆ ಎಂದು ಎಂದು ದ.ಕ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ದ.ಕ. ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬದಲಾಗಿ ರಾಷ್ಟ್ರೀಯ ಹೆದ್ದಾರಿಯ ನೂರಾರು ಸಮಸ್ಯೆಗಳು ಅಧಿಕಗೊಂಡು, ಪಂಪ್ವೆಲ್ ಪ್ಲೈಓವರ್ ಸೇರಿದಂತೆ ಹಲವು ವೈಫಲ್ಯಗಳೇ ಕಾಣಸಿಗುತ್ತಿವೆ ಎಂದು ಟೀಕಿಸಿದರು.
ಈ ವೇಳೆ ಮಾತನಾಡಿದ ರಮಾನಾಥ ರೈ, ಪ್ರಸ್ತುತ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಂದ ಯಾವುದೇ ಕೆಲಸ ಆಗುತ್ತಿಲ್ಲ. ಹಿಂದಿನ ಶಾಸಕರು ಮಾಡಿದ ಕೆಲಸಗಳನ್ನು ಮಾಡುತ್ತಿದ್ದಾರೆ ಮಾತ್ರ. ದ.ಕ. ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಆಗುವಂತೆ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, “ನಮ್ಮ ಬೂತ್, ನಮ್ಮ ಹೊಣೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲರೂ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಬಿಜೆಪಿ ಕಳೆದ ಚುನಾವಣೆಯ ಸಂದರ್ಭ ಹೇಳಿದ್ದೇನು ಮತ್ತು ಮಾಡಿದ್ದೇನು ಎಂಬುದನ್ನು ತಿಳಿಸಬೇಕಾಗಿದೆ. ಐಟಿ ದಾಳಿ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಮಾಡುತ್ತಿರುವ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಮಾತ್ರವಲ್ಲ, ಕಾಂಗ್ರೆಸ್ ಪಕ್ಷದಿಂದ ಬಿಲ್ಲವ ಸಮಾಜಕ್ಕೆ ಲೋಕಸಭಾ ಕ್ಷೇತ್ರಕ್ಕೆ 2 ಪ್ರಾತಿನಿಧ್ಯ ನೀಡಿದೆ. ಆದರೆ, ಬಿಜೆಪಿ 28 ಕ್ಷೇತ್ರದಲ್ಲಿ ಯಾವುದೇ ಬಿಲ್ಲವ ಅಭ್ಯರ್ಥಿಗೆ ಯಾಕೆ ಪ್ರಾತಿನಿಧ್ಯ ನೀಡಿಲ್ಲ ಎಂಬುದಕ್ಕೆ ಉತ್ತರ ನೀಡಬೇಕಿದೆ ಎಂದು ತಿಳಿಸಿದರು.