ಬೆಂಗಳೂರು ನ 06 : ಅಕ್ರಮ ಅಸ್ತಿ ಸಂಪಾದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ ಕೆ ಶಿವಕುಮಾರ್ ಆದಾಯ ತೆರಿಗೆ ಇಲಾಖೆಯ ವಿಚಾರಣೆಗೆ ಇದೇ ಮೊದಲ ಬಾರಿಗೆ ಕುಟುಂಬ ಸಮೇತರಾಗಿ ಹಾಜರಾದರು. ಈಗಾಗಲೇ 6 ಬಾರಿ ಡಿಕೆಶಿ ಹಾಜರಾಗಿದ್ದು,7ನೆ ಬಾರಿ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಇಲಾಖೆ ನೋಟೀಸ್ ನೀಡಿತ್ತು. ಈ ಹಿನ್ನಲೆಯಲ್ಲಿ ಡಿಕೆಶಿ ತಮ್ಮ ತಾಯಿ ಗೌರಮ್ಮ, ಪತ್ನಿ ಉಷಾ ಮತ್ತು ಮಗಳು ಐಶ್ವರ್ಯ ಹಾಗೂ ಸಂಸದ ಡಿ.ಕೆ. ಸುರೇಶ್, ಸಹೋದರಿ ಜೊತೆ ಕ್ವಿನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ನ 6 ರ ಸೋಮವಾರ ಆಗಮಿಸಿ ವಿಚಾರಣೆಗೆ ಹಾಜರಾದರು. ಐಟಿ ಇಲಾಖೆ ನೀಡಿದ ನೊಟೀಸ್ ನಲ್ಲಿ ಸ್ಪಷ್ಟ ವಾಗಿ ಲೆಕ್ಕಪರಿಶೋಧಕರನ್ನು ಕರೆದು ಕೊಂಡು ಬಾರದಂತೆಯೂ ಉಲ್ಲೇಖಿಸಿರುವುದರಿಂದ ಚಾರ್ಟೆಡ್ ಅಕೌಂಟೆಂಟ್ ಹಾಗೂ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಡಿಕೆಶಿ ವಿಚಾರಣೆಗೆ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.