ಮಂಗಳೂರು, ಮಾ 30(MSP): ಬಿಜೆಪಿ ಪಕ್ಷದ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಅಧಿಕೃತವಾಗಿ ಆರಂಭವಾಗಿದ್ದು ಕಾಂಗ್ರೆಸ್ ಮತ್ತೆ ಸೋಲುವ ಭೀತಿಯಿಂದ ಈಗಲೇ ಮಾಧ್ಯಮವೊಂದನ್ನು ದುರ್ಬಳಕೆ ಮಾಡುವ ಮೂಲಕ ಬಿಜೆಪಿ ವಿರುದ್ದ ವ್ಯವಸ್ಥಿತ ಅಪಪ್ರಚಾರ ಮಾಡುವ ಕಾರ್ಯದಲ್ಲಿ ಕಾಂಗ್ರೆಸ್ ತೊಡಗಿದೆ. ಸುಳ್ಳು ಸುದ್ದಿಯನ್ನು ಹಬ್ಬಿಸಿ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ಈಗಾಗಲೇ ಚುನಾವಣಾ ಆಯೋಗ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಲಾಗಿದೆ ಎಂದು ಬಿಜೆಪಿಯ ಜಿಲ್ಲಾ ಚುನಾವಣಾ ಕಾನೂನು ವಿಭಾಗದ ಪ್ರಮುಖ್ ಕೆ.ಶಂಭು ಶರ್ಮ ಹೇಳಿದ್ದಾರೆ.
ಅವರು ಮಾ.30ರ ಶನಿವಾರ ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಬಿಜೆಪಿಯ ಚುನಾವಣಾ ಕಚೇರಿಯಲ್ಲಿ, ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಸಂಸದ ನಳಿನ್ಕುಮಾರ್ ಕಟೀಲ್ ಅವರ ಸಾಧನೆ ಮತ್ತು ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಖಾಸಗಿ ಮಾಧ್ಯಮವೊಂದನ್ನು ಬಳಸಿ ಅಪಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದೆ. ಜಾತ್ಯಾತೀತ ಪಕ್ಷ ಎಂದು ಬೊಗಳೆ ಬಿಡುವ ಕಾಂಗ್ರೆಸ್ ನಾಯಕರು ಅಪಪ್ರಚಾರದ ಕಾರ್ಯಕ್ಕೆ ಜಾತಿಯ ಹೆಸರನ್ನು ಬಳಸಿ ಹಿಂದೂ ಸಮಾಜವನ್ನು ಒಡೆಯುವ ಷಡಂತ್ರ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿಸಿ ಮಾತನಾಡಿದ ಅವರು, ಆರ೦ಭದಲ್ಲಿ ಕಾಂಗ್ರೆಸ್ ನಾಯಕರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈ ಅವರ ಹೆಸರಿನಲ್ಲಿ ಕರಪತ್ರವೊ೦ದನ್ನು ಮುದ್ರಿಸಿ, ಜಾತಿ ಹೆಸರಿನಲ್ಲಿ ಮತ ನೀಡುವಂತೆ ಅದರಲ್ಲಿ ಒತ್ತಾಯಿಸಿದ್ದರು. ನಳಿನ್ಕುಮಾರ್ ಕಟೀಲ್ ಸಹಿತ ಕೆಲವು ನಾಯಕರ ಹೆಸರನ್ನು ಆ ಕರಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ ತಮ್ಮ ಹೆಸರಿನಲ್ಲಿ ಇ೦ತಹ ಕರಪತ್ರ ಮುದ್ರಣವಾಗಿದೆ ಎಂದು ತಿಳಿಯುತ್ತಿದ್ದಂತೆ ಮಾಲಾಡಿ
ಅವರು ಪೊಲೀಸ್ ಕಮಿಷನರ್ಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಮಾತ್ರವಲ್ಲಿದೆ ಮಾಧ್ಯಮಗಳಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ರಾಜಕೀಯ ಲಾಭ ಪಡೆಯಲು ಯಾರೋ ದುಷ್ಕರ್ಮಿ ತಮ್ಮ ಹೆಸರು ಬಳಕೆ ಮಾಡಿ ಕರಪತ್ರ ಹಂಚಿದ್ದಾರೆ. ಬಂಟರ ಯಾನೆ ನಡವರ ಸಂಘ ಯಾವುದೇ ಪಕ್ಷ
ಹಾಗೂ ವ್ಯಕ್ತಿಯ ಪರವಾಗಿಲ್ಲ ಎಂದು ಮಾಲಾಡಿ ಅವರು ಸ್ಪಷ್ಟನೆ ನೀಡಿದ್ದರು.
ಈ ಹಿ೦ದಿನ ಚುನಾವಣೆಗಳಲ್ಲೂ ಕೆಲವು ಮಾಧ್ಯಮಗಳು ನಳಿನ್ಕುಮಾರ್ ವಿರುದ್ದ ಅಪಪ್ರಚಾರ ಮಾಡಿದಾಗ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯ ದೂರು ಸ್ವೀಕರಿಸಿ ಯಾವುದೇ ಅಪಪ್ರಚಾರದ ಸುದ್ದಿ ಪ್ರಸಾರ ಮಾಡದಂತೆ ಆದೇಶ ನೀಡಿರುವುದು ಇಲ್ಲಿ ಉಲ್ಲೇಖನೀಯ. ಕಾಂಗ್ರೆಸ್ ಪಕ್ಷ ಹಿ೦ದೂ ಸಮಾಜ ಹಾಗೂ ಜಾತಿ-ಜಾತಿ ನಡುವೆ ವೈಷಮ್ಯವನ್ನು ಸೃಷ್ಟಿಸಿ ಷಡ್ಯಂತ್ರ ಮಾಡುವ ಬದಲು ತಮ್ಮ ಅಭ್ಯರ್ಥಿ ಹಾಗೂ ಪಕ್ಷದ ಪರ ಪ್ರಚಾರ ನಡೆಸಲಿ. ಇಲ್ಲವಾದರೆ ಚುನಾವಣೆಯಲ್ಲಿ ಹೇಗೆ ಪಾಠ ಕಲಿಸಬೇಕೆಂದು ಮತದಾರರಿಗೆ ತಿಳಿದಿದೆ . "ಖಾಸಗಿ ಮಾಧ್ಯಮ ಹಾಗೂ ಕಾಂಗ್ರೇಸ್ " ಮಾಡಿದ ಕುಕೃತ್ಯವು ಅಪ್ಪಟ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಇದರ ವಿರುದ್ದ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.