ಹೆಬ್ರಿ, ಮಾ30(SS): ಎಪ್ರಿಲ್ 1ರಿಂದ 30ರವರೆಗೆ ಒಂದು ತಿಂಗಳ ಕಾಲ ರಾಷ್ಟ್ರೀಯ ಹೆದ್ದಾರಿ 169 ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ವಾಹನ ಸಂಚಾರ ಕ್ಕೆ ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ದುಸ್ತರವಾಗಿತ್ತು. ಗುಡ್ಡ ಕುಸಿತಕ್ಕೆ ಶಾಶ್ವತ ಪರಿಹಾರ ಮತ್ತು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಗಿ ಸಲುವಾಗಿ 1 ತಿಂಗಳ ಕಾಲ ದುರಸ್ತಿ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.
ದುರಸ್ತಿ ಕಾರ್ಯ ನಡೆಯಲಿರುವುದರಿಂದ ಒಂದು ತಿಂಗಳ ಘಾಟಿಯಲ್ಲಿನ ವಾಹನ ನಿರ್ಭಂದಿಂದಾಗಿ ಉಂಟಾಗುವ ಸಮಸ್ಯೆಗೆ ಸುಗಮ ಸಂಚಾರ ಕಲ್ಪಿಸಲು ಜಿಲ್ಲಾಧಿಕಾರಿಗಳು ಬದಲಿ ಮಾರ್ಗ ಸೂಚಿಸಿದ್ದಾರೆ. ಎಪ್ರಿಲ್ ಒಂದರಿಂದ ಎಪ್ರಿಲ್ 30ರವರೆಗೆ ಈ ಬದಲಿ ಮಾರ್ಗಗಳು ಅನ್ವಯವಾಗುತ್ತದೆ. ಸಾಮಾನ್ಯ ಬಸ್ಸುಗಳು, ಜೀಪು, ವ್ಯಾನ್, ಎಲ್.ಸಿ.ವಿ, ದ್ವಿಚಕ್ರ ವಾಹನಗಳು ಒಂದು ತಿಂಗಳ ಕಾಲ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾಘಾಟ್, ಕಾರ್ಕಳ, ಉಡುಪಿ ಮೂಲಕವಾಗಿ ಸಂಚರಿಸಬಹುದು ಎಂದು ತಿಳಿಸಿದ್ದಾರೆ.
ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಷುರಿ ಬಸ್ಸುಗಳು ಮತ್ತು ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು ಏ. 30ರವರೆಗೆ ತೀರ್ಥಹಳ್ಳಿ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ದಾಪುರ, ಕುಂದಾಪುರ, ಉಡುಪಿ ದಾರಿಯಲ್ಲಿ ಸಂಚಾರ ನಡೆಸಬೇಕು ಎಂದು ಸೂಚಿಸಿದ್ದಾರೆ.
ಇನ್ನು, ಆಗುಂಬೆಯಲ್ಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಿನಿ ಬಸ್ ಗಳನ್ನು ತೀರ್ಥಹಳ್ಳಿ, ಆಗುಂಬೆ, ಬಿದರಗೋಡು, ಶೃಂಗೇರಿ ಮಾರ್ಗವಾಗಿಯೂ ಮತ್ತು ಸಾಮಾನ್ಯ ಬಸ್ಸುಗಳನ್ನು ತೀರ್ಥಹಳ್ಳಿ, ಕಲ್ಮನೆ, ಹೆಗ್ಗೋಡು, ರಾಮಕೃಷ್ಣಾಪುರ, ಕಮ್ಮರಡಿ, ಶೃಂಗೇರಿ ಮಾರ್ಗದಲ್ಲಿ ಸಂಚರಿಸಬಹುದು ಎಂದು ಸಲಹೆ ನೀಡಿದ್ದಾರೆ.