ಮಂಗಳೂರು, ಮಾ 30(MSP): ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕಾನೂನು ಕ್ರಮ ಕೈಗೊಂಡಿದ್ದು, ಚುನಾವಣೆ ಸಂಬಂಧ ಈಗಾಗಲೇ 21 ಚೆಕ್ ಪೋಸ್ಟ್ ಗಳನ್ನು ತೆರಯಲಾಗಿದ್ದು, ಇಲ್ಲಿ ದಿನಂಪ್ರತಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಈವರೆಗೆ ಒಟ್ಟಾರೆ 13,75000 ರೂಪಾಯಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾ.30 ರ ಶನಿವಾರ, ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇದಲ್ಲದೆ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ಇಲ್ಲಿ ತನಕ 1533 ಪ್ರಕರಣ ದಾಖಲಿಸಲಾಗಿದೆ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಹಾಗೂ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ 17 ಜನರ ವಿರುದ್ದ ಗಡಿಪಾರು ಆದೇಶ ಹೊರಡಿಸಲಾಗಿದೆ.
ಲೋಕಸಭಾ ಚುನಾವಣೆಯ ಹಿನ್ನಲೆ ಕಟ್ಟೆಚ್ಚರಕ್ಕಾಗಿ ನಗರಕ್ಕೆ ಈಗಾಗಲೇ 1 ಸಿ.ಆರ್.ಪಿ.ಎಫ್ ತುಕಡಿ ಆಗಮಿಸಿದ್ದು ನಗರ 21 ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಾಗಿದೆ. ಇದಲ್ಲದೆ ವಾರೆಂಟ್ ಗಳ ಪೈಕಿ 2996 ಜಾಮೀನು ರಹಿತ ವಾರೆಂಟುಗಳನ್ನು ಜಾರಿ ಮಾಡಲಾಗಿದೆ ಎಂದರು.
ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 2011 ಆಯುಧಗಳ ಪೈಕಿ 1953 ಆಯುಧಗಳನ್ನು ವಿವಿಧ ಠಾಣೆಯಲ್ಲಿ ಡೆಪಾಸಿಟ್ ಮಾಡಲಾಗಿದ್ದು, ಉಳಿದ 53 ಆಯುಧಗಳಿಗೆ ವಿನಾಯಿತಿ ನೀಡಲಾಗಿದೆ. ಮಾತ್ರವಲ್ಲದೆ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಯವರಿಗೆ ಚುನಾವಣಾ ಕರ್ತವ್ಯದ ಬಗ್ಗೆ ತರಬೇತಿ ನೀಡಲಾಗಿದೆ.