ಮಣಿಪಾಲ, ಮಾ30(SS): ಟಿಕೆಟ್ಗೆ ಯಡಿಯೂರಪ್ಪ, ಓಟಿಗೆ ಮೋದಿ ಮೋದಿ ಅಂತಾ ಶೋಭಾ ಕರಂದ್ಲಾಜೆ ಹೇಳುತ್ತಿದ್ದಾರೆ ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆಯವರು ಟಿಕೆಟಿಗಾಗಿ ಯಡಿಯೂರಪ್ಪ ಎನ್ನುತ್ತಾರೆ. ಮತಯಾಚಿಸುವಾಗ ಮೋದಿ ಎನ್ನುತ್ತಾರೆ. ಕೆಲಸ ಮಾಡುವ ಸಂಸದರು ಬೇಕೇ ಅಥವಾ ಕೆಲಸ ಮಾಡದವರು ಬೇಕೇ ಎಂಬುದನ್ನು ನಿರ್ಧರಿಸುವ ಕಾಲವಿದು. ಕ್ಷೇತ್ರದ ಜನತೆಗೆ ಅಭಿವೃದ್ಧಿ ಪಡಿಸುವ ಓರ್ವ ಸಂಸದ ಬೇಕು, ಕೆಲಸ ಮಾಡುವ ಪ್ರತಿನಿಧಿ ಬೇಕು ಎಂದು ಹೇಳಿದರು.
ಮರಳಿನ ಸಮಸ್ಯೆಗೆ ನಾನು ಕಾರಣ ಎಂಬುದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿದ್ದ ಸಂದರ್ಭ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡಬಾರದು ಎಂಬ ತಡೆಯಾಜ್ಞೆ ಇತ್ತು. ಆಗ ನಾನು ಕಾನೂನು ಸಚಿವ ಜಯಚಂದ್ರ ಹಾಗೂ ಸರಕಾರದ ವಕೀಲರಾದ ಅಶೋಕ್ ದೇವರಾಜ್ ಅವರಲ್ಲಿ ಚರ್ಚಿಸಿ ಶೋಭಾ ಕರಂದ್ಲಾಜೆಯವರಲ್ಲಿ ಕೇಂದ್ರ ಸರಕಾರದಿಂದ ಅಫಿದವಿತ್ ಸಲ್ಲಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಅಧಿಕಾರಿಗಳೇ ಹೋಗಿ ಅಫಿದವಿತ್ ಸಲ್ಲಿಸಿದರು. ತದನಂತರ ತಡೆಯಾಜ್ಞೆ ತೆರವುಗೊಳಿಸಿ ಹೊಸ ಪರವಾನಿಗೆ ಕೊಡುವಂತೆ ಆದೇಶಿಸಿ ಉಡುಪಿ ಜಿಲ್ಲೆಯಲ್ಲಿ 9 ಲಕ್ಷ ಟನ್ ಮರಳನ್ನು ತೆಗೆಯಲು ನಾನು ಅವಕಾಶ ಮಾಡಿಕೊಟ್ಟೆ. ಅದರಲ್ಲಿ 6 ಲಕ್ಷ ಟನ್ ಮರಳು ತೆಗೆಯಲು ಸಾಧ್ಯವಾಯಿತು ಎಂದು ತಿಳಿಸಿದರು.
ನನ್ನ ಕಾಲದಲ್ಲಿ 28 ಬ್ಲಾಕಿನಲ್ಲಿ 165 ಜನರಿಗೆ ಮರಳು ತೆಗೆಯಲು ಪರವಾನಿಗೆ ಕೊಡುವ ಕೆಲಸವೂ ಆಯಿತು. ಜಿಲ್ಲೆಯ ಮರಳು ಜಿಲ್ಲೆಗೆ ಮಾತ್ರ ಎಂಬ ಕಾನೂನು ಮಾಡಿದೆ ಎಂದು ಹೇಳಿದರು.
ಕೇಂದ್ರ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇದಿತ ಎಂದಿದೆ. ಈ ತಿದ್ದುಪಡಿಯನ್ನು ಶೋಭಾ ಕರಂದ್ಲಾಜೆ ಮಾಡಿಸಬೇಕಿತ್ತು. ಅದರೆ ಅವರು ಮಾಡಲಿಲ್ಲ. ಹಾಗಾಗಿ ಇದು ನನ್ನ ವೈಫಲ್ಯ ಅಲ್ಲ, ಬದಲಾಗಿ ಶೋಭಾರ ವೈಫಲ್ಯ ಎಂದು ಆರೋಪಿಸಿದರು.