ಕುಂದಾಪುರ, ಮಾ 30(SM): ಇಲ್ಲಿನ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಎಂಬಲ್ಲಿ ಜ.26 ರಂದು ತಡರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ 6 ಮಂದಿ ಆರೋಪಿಗಳ ಪರವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಶನಿವಾರ ಆದೇಶ ನೀಡಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ 16 ಆರೋಪಿಗಳ ಪೈಕಿ ಹರೀಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ ಹಾಗೂ ಇತರ ಆರೋಪಿಗಳಾದ ಮಹೇಶ್ ಹಾಗೂ ರವಿಚಂದ್ರ ಅವರಿಗೆ ಜಾಮೀನು ನೀಡುವಂತೆ ಮನವಿ ಮಾಡಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.
ಆರೋಪಿಗಳ ಪರ ಜಾಮೀನಿಗಾಗಿ ವಾದ ಮಂಡನೆ ಮಾಡಲಾಗಿತ್ತು. ಪ್ರಾಸಿಕ್ಯೂಶನ್ ಪರವಾಗಿ ವಾದ ಮಂಡನೆ ಮಾಡಿದ್ದ ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಅವರು, ಜಿಲ್ಲೆಯ ಜನತೆಯನ್ನೆ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ ಇದಾಗಿದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವುದರಿಂದ ಆರೋಪಿಗಳಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯ ನಾಶ ಆಗುವ ಸಾಧ್ಯತೆಗಳಿರುವುದರಿಂದ ಜಾಮೀನು ನೀಡದಂತೆ ಮನವಿ ಮಾಡಿದ್ದರು.
ಎರಡು ಕಡೆಗಳ ವಾದವನ್ನು ಆಲಿಸಿದ್ದ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರು ಶನಿವಾರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದ್ದಾರೆ.