ಕುಂದಾಪುರ, ಮಾ 30(SM): ಸ್ನೇಹಿತರಿಬ್ಬರು ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಹಾಲಾಡಿ ಸಮೀಪದ ಕಕ್ಕುಂಜೆ ಕ್ರಾಸ್ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ತ ಯುವಕನನ್ನು ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಹಾರ್ದಳ್ಳಿ ಮಂಡಳ್ಳಿ ನಿವಾಸಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಚೇತನ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಚೇತನ್ ಸ್ನೇಹಿತ ಶಿವಮೊಗ್ಗ ಮೂಲದ ದೀಪಕ್ ಎಂದು ಗುರುತಿಸಲಾಗಿದೆ.
ಇಬ್ಬರೂ ಬೆಂಗಳೂರಿನಲ್ಲಿ ಜೊತೆಯಾಗಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ವಾರದ ಹಿಂದೆ ಚೇತನ್ ಮನೆಯಲ್ಲಿ ಹರಕೆ ಬಯಲಾಟ ಇದ್ದ ಕಾರಣ ಊರಿಗೆ ಬಂದಿದ್ದರು. ಶನಿವಾರ ಸಂಜೆ ಸುಮಾರು ೮ ಗಂಟೆಗೆ ಅಪಾಚಿ ಬೈಕಿನಲ್ಲಿ ಬಿದ್ಕಲ್ಕಟ್ಟೆಯಿಂದ ಹಾಲಾಡಿ ಕಡೆಗೆ ತೆರಳುತ್ತಿದ್ದರು. ಹಾಲಾಡಿ ಸಮೀಪದ ಕಕ್ಕುಂಜೆ ಕ್ರಾಸ್ ಬಳಿ ಬರುತ್ತಿದ್ದಾಗ ಹಾಲಾಡಿ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ದೀಪಕ್ ರನ್ನು ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.