ಉಡುಪಿ, ಮಾ 31(SM): ಮನೆಯಲ್ಲಿ ತಾಯಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬ ಮನೆ ಬಿಟ್ಟು ರೈಲನ್ನೇರಿರುವ ಘಟನೆ ನಡೆದಿದೆ. ಭಟ್ಕಳದ ಸೋನಾರ್ಕೇರಿ ಆಂಗ್ಲ ಮಾಧ್ಯಮ ಸಾಲೆಯ 9ನೇ ತರಗತಿ ವಿದ್ಯಾರ್ಥಿಯೊಬ್ಬರು ತಾಯಿಯ ಬಳಿ ಮೊಬೈಲು ಕೊಡಿಸುವಂತೆ ಪೀಡಿದುತ್ತಿದ್ದ. ತಾಯಿ ಮೊದಲು ಚೆನ್ನಾಗಿ ಓದು ಎಂದು ಬುದ್ದಿವಾದ ಹೇಳಿದ್ದರು. ಅಷ್ಟಕ್ಕೆ ಸಿಟ್ಟುಗೊಂಡ ಆತ ಮಾರ್ಚ್ 29ರಂದು ಮನೆಯಲ್ಲಿ ಹೇಳದೇ ರೈಲು ಹತ್ತಿ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬಂದಿಳಿದಿದ್ದ.
ಮನೆ ಬಿಟ್ಟು ಬಂದಿದ್ದ ಭಟ್ಕಳದ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದ ರೈಲ್ವೆ ಪೊಲೀಸರು ರಕ್ಷಿಸಿ, ತಾಯಿಗೆ ಒಪ್ಪಿಸಿದ್ದಾರೆ. ಮಾ.30ರಂದು ರೈಲ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಗಾಂವ್ಕಾರ್ ಮತ್ತು ಮುಖ್ಯ ಪೇದೆ ವೇಣು ಸಿ.ಎಚ್. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬರುವ ರೈಲುಗಳನ್ನು ಅವಲೋಕಿಸುತ್ತಿದ್ದಾಗ, ನಿಲ್ದಾಣದಲ್ಲಿ ಕರ್ತವ್ಯ ನಡೆಸುತ್ತಿದ್ದಾಗ ಈ ಬಾಲಕ ಪ್ಲಾಟ್ ಫಾರ್ಮ್ ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದು ಕಂಡಬಂದಿತ್ತು. ಆತನನ್ನು ವಿಚಾರಿಸಿದಾಗ ಆತ ಆಸ್ಪತ್ರೆಯಲ್ಲಿರುವ ತನ್ನ ಗೆಳೆಯನನ್ನು ನೋಡುವುದಕ್ಕೆ ಬಂದಿದ್ದೇನೆ ಎಂದು ಹೇಳಿದ್ದ. ಆತನ ಉತ್ತರದಿಂದ ಸಂಶಯಗೊಂಡು, ಕಚೇರಿಗೆ ಕರೆದೊಯ್ಧು ವಿಚಾರಿಸಿದಾಗ ಮೊಬೈಲ್ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.
ನಂತರ ಆತನ ಶಾಲೆಯ ಶಿಕ್ಷಕರಲ್ಲಿ ವಿಚಾರಿಸಿ, ಅವರ ಮೂಲಕ ತಾಯಿಗೆ ಮಾಹಿತಿ ನೀಡಲಾಯಿತು. ಹುಡುಗನ ತಾಯಿ 2 ವರ್ಷಗಳ ಹಿಂದೆ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡಿದ್ದು, ಈಗ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಆಕೆ 2 ದಿನಗಳ ಕಾಲ ಕಾಣೆಯಾದ ಮಗನನ್ನು ಎಲ್ಲಾ ಕಡೆ ಹುಡುಕಿ ಪತ್ತೆಯಾಗಿ ಕಂಗಾಲಾಗಿದ್ದರು. ಇದೀಗ ಮಗುವನ್ನು ಕಂಡು ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ.