ಪುತ್ತೂರು, ಏ01(SS): ಚುನಾವಣೆ ಬಂದಾಗ ಸ್ವಾರ್ಥವನ್ನು ಬಿಟ್ಟು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಕರೆ ನೀಡಿದ್ದಾರೆ.
ಪಕ್ಷದ ಸಮಾವೇಶ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ರಾಜಕೀಯದಲ್ಲಿ ನಿಷ್ಠಾವಂತರಿಗೆ ಭವಿಷ್ಯವಿದೆ. ಹಿಂದಕ್ಕೆ ಸರಿದರೆ ಅವರಿಗೇ ಹಿನ್ನಡೆಯಾಗುತ್ತದೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಹಿಂದೇಟು ಹಾಕಬಾರದು. ಸ್ವಾರ್ಥವನ್ನು ಬಿಟ್ಟು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದು ತಿಳಿಸಿದರು.
ಚುನಾವಣೆ ಬಂದಾಗ ಒಂದೇ ಮನೆಯವರಲ್ಲಿಯೂ ಭಿನ್ನಾಭಿಪ್ರಾಯಗಳು ಬರುತ್ತವೆ. ಆದರೆ ಆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ಗುರಿಯಾಗಬೇಕು. ಮೈತ್ರಿಯಲ್ಲಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಜೆಡಿಎಸ್, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷದ ಕ್ಷೇತ್ರದ ಮುಖಂಡರ ಚುನಾವಣಾ ಸಮಿತಿಯನ್ನೂ ರಚಿಸಲಾಗಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಅದರ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಬಹುಮತದಿಂದ ಗೆಲ್ಲುವ ಆತ್ಮವಿಶ್ವಾಸವಿದೆ. ನಾವೆಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಿಲ್ಲ ಎಂಬುದು ಬಿಜೆಪಿ ಯವರಿಗೂ ಅರ್ಥವಾಗಿದೆ ಎಂದು ಹೇಳಿದರು.