ಮಂಗಳೂರು,ಏ 01 (MSP): ಅವಿಭಜಿತ ದಕ್ಷಿಣ ಕನ್ನಡದ ರೈತರಿಂದ ಪ್ರಾರಂಭವಾದ ವಿಜಯಾ ಬ್ಯಾಂಕ್ ಈ ಭಾಗದ ಹೆಮ್ಮೆಯ ಪ್ರತೀಕವಾಗಿದೆ. ನಷ್ಟದಲ್ಲಿರುವ ಬ್ಯಾಂಕ್ ನೊಂದಿಗೆ ಲಾಭದಲ್ಲಿರುವ ವಿಜಯಾ ಬ್ಯಾಂಕ್ ನ್ನು ವಿಲೀನ ಮಾಡಲಾಗಿದೆ. ಏ.1 ರ ಮೂರ್ಖರ ದಿನದಂದು ವಿಜಯ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡಿ ಜಿಲ್ಲೆಯ ಜನರನ್ನು ಹಾಲಿ ಸಂಸದ ನಳಿನ್ ಕುಮಾರ್ ಮೂರ್ಖರನ್ನಾಗಿಸಿದ್ದಾರೆ ಎಂದು ಲೋಕಸಭಾ ದ.ಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಮಲ್ಲಿಕಟ್ಟೆಯಲ್ಲಿರುವ ವಿಜಯಬ್ಯಾಂಕ್ ಮುಂದೆ, ಏ.1 ರ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರುದ್ದ ನಿರಂತರ ಹೋರಾಟವನ್ನು ಮುಂದುವರಿಸಲಿದ್ದು, ಜಯ ಸಿಗುವವರೆಗೆ ಕಾಂಗ್ರೆಸ್ ಪಕ್ಷ ವಿರಮಿಸುವುದಿಲ್ಲ. ಚುನಾವಣೆಯಲ್ಲಿ ಗೆದ್ದರೆ ನನ್ನ ಮೊದಲ ಆದ್ಯತೆ ಕರಾವಳಿಯ ಪ್ರತಿಷ್ಟೆಯ ವಿಜಯ ಬ್ಯಾಂಕ್ ನ್ನು ಮರಳಿ ತರುವುದಾಗಿದೆ ಎಂದು ಮಿಥುನ್ ಅಶ್ವಾಸನೆ ನೀಡಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಜೆ.ಆರ್ ಲೋಬೋ, ಕೇಂದ್ರ ಸರ್ಕಾರವೂ ರಾಜಕೀಯ ಲಾಭಕ್ಕಾಗಿ ವಿಜಯ ಬ್ಯಾಂಕ್ ನ್ನು ವಿಲೀನ ಮಾಡಿದ್ದು, ಈ ಸಂದರ್ಭ ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕರಾವಳಿಯಲ್ಲಿ 7 ಬಿಜೆಪಿ ಶಾಸಕರು, ಒಬ್ಬ ಸಂಸದ ಇದ್ದು ಏನೂ ಪ್ರಯೋಜನ ? ಯಾರೊಬ್ಬರು ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿಲ್ಲ, ಮತ್ತು ಈ ಯೋಜನೆಯನ್ನು ನಿಲ್ಲಿಸಲು ದ್ವನಿ ಎತ್ತಿಲ್ಲ ಎಂದು ಆರೋಪಿಸಿದರು.
ರಮಾನಾಥ ರೈ ಮಾತನಾಡಿ, ವಿಜಯ ಬ್ಯಾಂಕ್ ಕರಾವಳಿಯ ಜನರಿಗೆ ತನ್ನ ಸಹಾಯಹಸ್ತ ನೀಡಿದೆ. ಆದ್ರೆ ಇಂದು ವಿಜಯ ಬ್ಯಾಂಕ್ ಸ್ಥಾಪಕ ಸುಂದರ ರಾಮ್ ಶೆಟ್ಟಿ ಪೋಟೋವನ್ನು ಬ್ಯಾಂಕ್ ನಲ್ಲಿಯೇ ಮೂಲೆಗುಂಪು ಮಾಡುವ ಪರಿಸ್ಥಿತಿ ಬಂದೊದಗಿದೆ. ಕೇಂದ್ರ ಯಾವಾಗ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿತೋ ಅಂದೇ ಕರಾವಳಿಗರಿಗೆ ಕರಾಳ ದಿನವಾಗಿದೆ ಎಂದರು.