ಮಂಗಳೂರು, ಮಾ01(SS): ವಿಜಯದಶಮಿಯ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮ ತಾಳಿದ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳ್ಳುವ ಮೂಲಕ ಯುಗಾಂತ್ಯವಾಗಿದೆ.
1931 ಅ.23ರಂದು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ ಸ್ಥಾಪನೆಗೊಂಡಿತ್ತು. ಅತ್ತಾವರ ಬಾಲಕೃಷ್ಣ ಶೆಟ್ಟಿ ನೇತೃತ್ವದ ರೈತರ ಗುಂಪು ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಬ್ಯಾಂಕ್ ಸ್ಥಾಪಿಸಿತು. ವಿಜಯ ದಶಮಿಯ ದಿನ ಸ್ಥಾಪನೆ ಆಗಿದ್ದರಿಂದ, ವಿಜಯಾ ಬ್ಯಾಂಕ್ ಎಂದು ಹೆಸರಿಡಲಾಗಿತ್ತು.
ಜಿಲ್ಲೆಯ ರೈತರ ಅವಶ್ಯಕತೆಗಳಿಗೆ ಸುಲಭ ಹಣಕಾಸಿನ ಲಭ್ಯತೆ ದೃಷ್ಟಿಯಿಂದ ಸ್ಥಾಪನೆ ಆಗಿತ್ತು. 1958ರಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಆಗಿ, 1980ರ ಏ.15ರಂದು ರಾಷ್ಟ್ರೀಕರಣಗೊಂಡಿತು. 1960-1968ರ ಅವಧಿಯಲ್ಲಿ ಇದು 9 ಸಣ್ಣ ಬ್ಯಾಂಕ್ಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡು ಅಖಿಲ ಭಾರತ ಮಟ್ಟದ ಬ್ಯಾಂಕಾಗಿದ್ದು, ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿ 2031 ಶಾಖೆಗಳನ್ನು ಹೊಂದಿತ್ತು.
ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಎಸ್ಬಿಐನಲ್ಲಿ ವಿಲೀನಗೊಂಡಿತ್ತು. ಇದೀಗ ವಿಜಯಾ ಬ್ಯಾಂಕ್ ಬಿಒಬಿಯಲ್ಲಿ ವಿಲೀನಗೊಂಡು ಕರ್ನಾಟಕದಲ್ಲಿ ಜನ್ಮತಾಳಿದ್ದ ಮತ್ತೊಂದು ಬ್ಯಾಂಕ್ ಇತಿಹಾಸದ ಪುಟ ಸೇರಿದೆ.
ಬ್ಯಾಂಕ್ ಆಫ್ ಬರೋಡಾದೊಂದಿಗೆ ಕರ್ನಾಟಕ ಮೂಲದ ವಿಜಯ ಬ್ಯಾಂಕ್ ಹಾಗೂ ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್ ಅನ್ನು ವಿಲೀನಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿತ್ತು. ಇದೀಗ ಈ ನಿರ್ಧಾರ ಇಂದಿನಿಂದ (ಏಪ್ರಿಲ್ 1, 2019) ಜಾರಿಗೆ ಬಂತು. ಇಂದಿನಿಂದ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಶಾಖೆಗಳು ಬ್ಯಾಂಕ್ ಆಫ್ ಬರೋಡಾ ಹೆಸರಿನಲ್ಲಿ ಕಾರ್ಯಾಚರಿಸಲಿವೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರೆಲ್ಲರನ್ನೂ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರೆಂದು ಪರಿಗಣಿಸಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ವಿಲೀನ ಪ್ರಕ್ರಿಯೆಯ ನಿಯಮದ ಪ್ರಕಾರ ವಿಜಯ ಬ್ಯಾಂಕ್ನ ಷೇರುದಾರರು ತಾವು ಹೊಂದಿರುವ 1 ಸಾವಿರ ಷೇರುಗಳಿಗೆ ಪರ್ಯಾಯವಾಗಿ ಬ್ಯಾಂಕ್ ಆಫ್ ಬರೋಡಾದ 402 ಷೇರುಗಳು ಹಾಗೂ ದೇನಾ ಬ್ಯಾಂಕ್ನ ಷೇರುದಾರರು ಪ್ರತಿ 1 ಸಾವಿರ ಷೇರುಗಳಿಗೆ ಬ್ಯಾಂಕ್ ಆಫ್ ಬರೋಡಾದ 110 ಷೇರುಗಳನ್ನು ಪಡೆದುಕೊಳ್ಳಲಿದ್ದಾರೆ.