ತುಮಕೂರು, ನ07: ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಹುಮ್ಮಸ್ಸಿನಲ್ಲಿ ನಾನಿದ್ದೆ. ಅಂದು ಸಿಎಂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ ಎಂದು ತುಮಕೂರಿನ ಹೊನವಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯ ಜಿ.ನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನು ಹಣ ಹಂಚಿರುವ ಕಥೆಯನ್ನು ಬಹಳ ರೋಚಕವಾಗಿ ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. " ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್ನಲ್ಲಿ 4 ಲಕ್ಷ ರೂ. ತುಂಬಿಕೊಂಡು ಹೋಗಿ ಹಂಚಿದ್ದೇನೆ, ಆಗ ನನಗೆ ಸಿದ್ದರಾಮಯ್ಯ ಸಿಎಂ ಆಗುವ ಕನಸಿತ್ತು, ಅವರು ಪ್ರಧಾನಿ ಆಗಬೇಕೆಂಬ ಆಸೆ ನನ್ನಲ್ಲಿ ಈಗಲೂ ಇದೆ. ಆದರೆ ಸಿದ್ದರಾಮಯ್ಯ ಪರ ಹೋರಾಟ ಮಾಡಿದ ನನ್ನನ್ನು ಕಾಂಗ್ರೇಸ್ ನವರೇ ವಿರೋಧಿಸುತ್ತಿದ್ದಾರೆ. ಹಾಗೆಂದು ನಾನು ಸುಮ್ಮನೇ ಕೂರುವುದಿಲ್ಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುತ್ತೇನೆ ಎಂದು ಹೇಳಿದ್ದಾರೆ. ಇವರ ಈ ಆಕ್ರೋಶಭರಿತ ಮಾತಿಗೆ ವೇದಿಕೆ ಮೇಲೆ ಕುಳಿತ್ತಿದ್ದ ತಿಪಟೂರಿನ ಕಾಂಗ್ರೆಸ್ ಶಾಸಕ ಷಡಕ್ಷರಿ ಸಾಕ್ಷಿಯಾದರು.