ಉಡುಪಿ, ಏ 01(SM): ನೋಟಾಕ್ಕೆ ಮತ ಹಾಕುವಂತೆ ಪ್ರಭಾವ ಬೀರುವುದು ಅಪರಾಧ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿ ವಿರುದ್ಧ ನೋಟಾ ಅಭಿಯಾನ ಮಾಡಿದರೆ ಅವರ ಮೇಲೆ ಕೇಸು ದಾಖಲಾಗುತ್ತದೆ ಎಂದು ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನೋಟಾ ಬಗ್ಗೆ ಮಾಹಿತಿ ನೀಡುವುದು ತಪ್ಪಲ್ಲ. ಆದರೆ ನೋಟಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೊಡುವಂತಿಲ್ಲ. ನೋಟಾ ಒಂದು ಆಯ್ಕೆ ಮಾತ್ರ. ಇದು ದೇಶದ ಮತದಾರರ ವೈಯಕ್ತಿಕ ಹಕ್ಕು. ಹೀಗಾಗಿ ನೋಟಾಕ್ಕೆ ಮತಹಾಕಿ ಎಂದು ಪ್ರಚಾರ ಮಾಡುವುದು ಕಾನೂನು ಬಾಹಿರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೋಟಾ ಅಭಿಯಾನ ಮಾಡುವಂತಿಲ್ಲ.
ನೋಟಾದ ಬಗ್ಗೆ ಯಾವ ವ್ಯಕ್ತಿಯೂ ಕೂಡ ಯಾವುದೇ ಮಾಧ್ಯಮಗಳಲ್ಲಿ ಪ್ರಚಾರ ಕೊಡುವಂತಿಲ್ಲ. ನೋಟಾದ ಬಗ್ಗೆ ಮಾಹಿತಿ ನೀಡುವ ಅವಕಾಶ ಇದೆ. ಆದರೆ ಅದನ್ನೇ ರಾಜಕೀಯಕ್ಕೆ ಬಳಸುವಂತಿಲ್ಲ. ಹೀಗೆ ಮಾಡಿ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿದಿದ್ದಾರೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ವ್ಯಕ್ತಿಗಳು ನೋಟಾ ಒತ್ತುವಂತೆ ಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಡಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ಸಿನಲ್ಲೇ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕೆಲ ಕಾಂಗ್ರೆಸ್ ನಾಯಕರು ಕೂಡ ಪ್ರಮೋದ್ ವಿರುದ್ಧ ನೋಟಾ ಒತ್ತುವಂತೆ ಪ್ರಚಾರ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೋಟಾದ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಎಚ್ಚರಿಕೆ ನೀಡಿದ್ದಾರೆ.