ಮಂಗಳೂರು, ಏ 01(SM): ವಾಹನ ಕಳವು ಪ್ರಕರಣದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸುಳ್ಯದ ಮುತ್ಲಾಜೆ ನಿವಾಸಿ ಕಿಶೋರ್ ಕುಮಾರ್(26) ಪ್ರಕರಣ ಆರೋಪಿಯಾಗಿದ್ದಾನೆ.
ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಶದಲ್ಲಿದ್ದ 6,00,000 ರೂಪಾಯಿ ಮೌಲ್ಯದ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
2018ರ ಫೆಬ್ರವರಿ 6ರಂದು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದವರಿಗೆ ಸೇರಿದ ಟೆಂಪೋ ಧಕ್ಕೆಯ ಮತ್ಸ್ಯಾಗಂಧಿ ಐಸ್ ಪ್ಲಾಟ್ ಮತ್ತು ಕೋಲ್ಡ್ ಸ್ಟೋರೆಜ್ ಎದುರು ನಿಲ್ಲಿಸಿದನ್ನು ಆರೋಪಿಗಳು ಕಳವು ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿರಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ವರ್ಷದ ಬಳಿಕ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.