ಬೆಳ್ತಂಗಡಿ, ಎ02(SS): ಸೈನಿಕರ ವಿಚಾರ ಹಿಡಿದುಕೊಂಡೇ ಬಿಜೆಪಿ ದೇಶದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.
ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಆಡಳಿತ ಸಮಯದಲ್ಲೇ ಸೈನಿಕರ ಮೇಲೆ ದಾಳಿ ನಡೆದಿದೆ. ಇದೀಗ ಸೈನಿಕರ ವಿಚಾರ ಹಿಡಿದುಕೊಂಡೇ ಬಿಜೆಪಿ ದೇಶದಲ್ಲಿ ರಾಜಕೀಯ ಮಾಡುತ್ತಿದೆ. ಜನರನ್ನು ವಂಚಿಸಿ ಸೈನಿಕರ ದಾಳಿ ಮುಂದಿಟ್ಟು ಮತಯಾಚಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೂಡ ಹೊರಬಂದು ಅಸಹಾಯಕತೆ ತೋಡಿಕೊಂಡಿದ್ದರು. ತಮಗೆ ಉಸಿರುಗಟ್ಟುವ ವಾತಾವರಣವಿದೆ ಎಂದು ನ್ಯಾಯಮೂರ್ತಿಗಳು ಖುದ್ದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಭವಿಷ್ಯದ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕು. ವಿದ್ಯಾವಂತ ಸಂಸದನನ್ನು ಆರಿಸುವ ಮೂಲಕ ಜಿಲ್ಲೆಯ ಧ್ವನಿ ಸಂಸತ್ತಿನಲ್ಲಿ ಮೊಳಗುವಂತೆ ಮಾಡಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬ ನಾಯಕರು ಕೂಡ ಪ್ರತಿ ಬೂತ್ನಲ್ಲಿ ಕಾಂಗ್ರೆಸ್ ಪಕ್ಷ ವನ್ನು ಲೀಡ್ಗೆ ತರಬೇಕಿದೆ ಎಂದರು.
ಈ ಹಿಂದೆ ಜನಾರ್ದನ ಪೂಜಾರಿಯವರ ವಿರುದ್ಧ ತುಚ್ಛವಾಗಿ ಮಾತನಾಡಿದವರೇ ಅವರ ಕಾಲಿಗೆ ಬಿದ್ದಿದ್ದಾರೆ. ಪೂಜಾರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಆದರೆ, ಜನಾರ್ದನ ಪೂಜಾರಿ ಮಾತ್ರ ಮಿಥುನ್ ರೈ ಗೆಲ್ಲುತ್ತಾರೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಮಸ್ಯೆಗಳ ಬಗ್ಗೆ ನಳಿನ್ ಕೇಂದ್ರದಲ್ಲಿ ಧ್ವನಿ ಎತ್ತಿಲ್ಲ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡದ ನಳಿನ್ ಅವರನ್ನು ಸೋಲಿಸಬೇಕಿದೆ. ಮಿಥುನ್ ರೈ ಅವರಿಗೆ ಈ ಬಾರಿ ಅವಕಾಶ ನೀಡಿ. ಕಾಂಗ್ರೆಸ್ ಗೆಲ್ಲಿಸೋಣ ಎಂದು ಕರೆ ನೀಡಿದರು.