ಬೆಳ್ತಂಗಡಿ, ಎ02(SS): ದೇಶದಲ್ಲಿ ಸುಳ್ಳುಗಳನ್ನೇ ಹೇಳುವ ಪಕ್ಷವೊಂದಿದ್ದರೆ ಅದು ಬಿಜೆಪಿ ಎಂದು ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯ ಮಾಡಿದ್ದಾರೆ.
ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದರೆ ಭಾರತೀಯ ಜೂಟ್ ಪಾರ್ಟಿ ಇದ್ದ ಹಾಗೆ. ಸುಳ್ಳುಗಳನ್ನೇ ಹೇಳುವ ಪಕ್ಷ ಬಿಜೆಪಿ. ಧರ್ಮ, ಜಾತಿಗಳಲ್ಲಿ ದ್ವೇಷ ಹುಟ್ಟಿಸಿ ಜನರನ್ನು ವಂಚಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಕಿಡಿ ಕಾರಿದರು.
ಸ್ವಿಸ್ ಬ್ಯಾಂಕ್ನಲ್ಲಿ ನೆಹರೂ ಕುಟುಂಬದ ಹಣವಿದೆ ಎಂದು ಬಿಜೆಪಿಯವರು ಅಪ ಪ್ರಚಾರ ಮಾಡಿದರು. ಕಪ್ಪು ಹಣ ತಂದು ಜನರಿಗೆ 15 ಲಕ್ಷ ರೂಪಾಯಿ ನೀಡುತ್ತೇವೆಂದು ಭರವಸೆ ನೀಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಅವರಿಗೆ ಸ್ವಿಟ್ಜರ್ ಲ್ಯಾಂಡ್ ಮರೆತುಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಐದು ವರ್ಷದ ಆಡಳಿತದಲ್ಲಿ ಮೋದಿ ಸರಕಾರಕ್ಕೆ ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಕೇವಲ ಪ್ರಚಾರದ ಮೂಲಕ ಜನರನ್ನು ಮೋಸಗೊಳಿಸುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ. ಈ ಕುರಿತು ಮತದಾರರು ಎಚ್ಚರದಿಂದ ಮತ ಚಲಾಯಿಸಿ ಎಂದರು.
ಮಾತ್ರವಲ್ಲ, ಬಿಜೆಪಿ ದೇಶದಲ್ಲಿ ನೋಟ್ ಬ್ಯಾನ್ ಮಾಡುವ ಮೂಲಕ ನೂರಾರು ಜನರ ಸಾವಿಗೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲೇ ರಿಸರ್ವ್ ಬ್ಯಾಂಕ್ ಗವರ್ನರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಐಟಿ, ಇಡಿಗಳನ್ನು ರಾಜಕೀಯ ವಿರೋಧಿಗಳನ್ನು ಧಮನಿಸಲು ಬಿಜೆಪಿಯವರು ಬಳಕೆ ಮಾಡುತ್ತಿದ್ದಾರೆ. ಬಿಜೆಪಿಯವರ ಆಪ್ತರ ಮನೆಗೆ ಐಟಿ, ಇಡಿ ಯಾವತ್ತೂ ರೈಡ್ ಮಾಡಿಲ್ಲ ಎಂದು ಟೀಕಿಸಿದರು.