ಉಡುಪಿ,ಏ 02 (MSP): ಪೆರಂಪಳ್ಳಿಯ ಬೊಬ್ಬರ್ಯ ಕಟ್ಟೆ ಎಂಬಲ್ಲಿ ಮಾರ್ಚ್ 16 ರಿಂದ ಸುಮಾರು ಒಂದು ವಾರಗಳ ತನಕ ಅಚ್ಚರಿಯೆಂಬಂತೆ ಕಾಡಿನ ಪದೇ ಪದೇ ಅಲ್ಲಲ್ಲಿ ವಿನಾ ಕಾರಣ ಬೆಂಕಿ ಬೀಳುತ್ತಿತ್ತು. ಆದರೆ ಯಾವುದೇ ಹಾನಿ ಸಂಭವಿಸಿರಿರಲಿಲ್ಲ. ಒಂದೆರಡು ದಿನ ಬೆಂಕಿ ಬಿದ್ದರೆ ಅದನ್ನು ಯಾರೋ ಬೇಕೆಂದು
ಮಾಡುತ್ತಿದ್ದಾರೆ, ಬೆಂಕಿ ಹಾಕಿ ಗ್ರಾಮಸ್ಥರನ್ನು ಹೆದರಿಸುತ್ತಿದ್ದಾರೆ ಎಂದುಕೊಳ್ಳಬಹುದು. ಆದರೆ ಇದರ ಹಿಂದಿನ ರಹಸ್ಯ ಮಾತ್ರ ಬೇರೆಯೆ ಇತ್ತು. ಗ್ರಾಮಸ್ಥರ ದೂರಿನ ಮೇರೆಗೆ ಒಂದೆರಡು ದಿನ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು. ಆದರೆ ಪ್ರತಿದಿನ ಈ ರೀತಿ ನಡೆಯಲು ಸಾಧ್ಯವೇ? ಅದು ಅಲ್ಲಲ್ಲಿ ಬೆಂಕಿ ಕೊಟ್ಟು ಹೋಗುವುದು ಎಂದರೆ ಸಾಮಾನ್ಯದ ಮಾತೇ?
ಉರಿ ಬಿಸಿಲಿಗೆ ಪ್ರಾಕೃತಿಕ ಸಹಜ ಬೆಂಕಿ ಅವಘಡ ಎಂದುಕೊಂಡರೂ, ಅದು ಅಸಹಜ ಘಟನೆ. ನೇಮೋತ್ಸವದ ದಿನ ಹತ್ತಿರವಾಗುತ್ತಿದ್ದಂತೆ ಅಲ್ಲಲ್ಲಿ ಬೆಂಕಿ ಬೀಳುವ ಪ್ರಮಾಣ ಜಾಸ್ತಿಯಾಗಿತ್ತು. ಸ್ಥಳೀಯರು ಕೂಡ ಸಹನೆಯಿಂದಲೇ ಬಕೆಟ್ ನೀರು ತುಂಬಿಕೊಂಡು ಹೋಗಿ ಹರಸಾಹಸ ಪಟ್ಟು ಬೆಂಕಿ ನಂದಿಸುತ್ತಿದ್ದರು. ಆಗ ಅಲ್ಲಿನ ಜನರಿಗೆ ಇದು ಯಾರೋ ಉದ್ದೇಶಪೂರ್ವಕವಾಗಿ ಹಾಕುತ್ತಿಲ್ಲ, ಏನೋ ತಮ್ಮಿಂದ ತಪ್ಪು ನಡೆದಿದೆ ಎಂದೆಣಿಸಿತು.
ಕಳವಳಗೊಂಡ ಗ್ರಾಮಸ್ಥರು ದೈವದ ಮೊರೆ ಹೋದರು. ಹಿಂದೆ ಗ್ರಾಮದಲ್ಲಿ ಏನೇ ಲೋಪ ಕಂಡು ಬಂದರೂ, ಪ್ರಥಮವಾಗಿ ದೂರು ಕೊಡುವುದು ಊರನ್ನು ಕಾಯುವ ದೈವಸ್ಥಾನಕ್ಕೆ. ತುಳುನಾಡಿನ ಜನರು ದೈವದ ಮೇಲೆ ಅಪಾರ ನಂಬಿಕೆ ಇಡುತ್ತಾರೆ. ದೈವದ ಕಟ್ಟಪ್ಪಣೆಯನ್ನು ಯಾರೂ ತಳ್ಳಿ ಹಾಕೋದಿಲ್ಲ.
ಒಂದು ತಿಂಗಳ ಹಿಂದೆ ದೈವಸ್ಥಾನ ಜೀರ್ಣೋದ್ಧಾರ ವಿಷಯದಲ್ಲಿ ಊರಿನವರು ಮತ್ತು ಮೊಕ್ತೇಸರರ ಮಧ್ಯೆ ಮನಸ್ತಾಪ ಬಂದು ಮಾತಿನ ಚಕಮಕಿ ನಡೆದಿತ್ತು. ಮತ್ತೆ ಮಾತುಕತೆ ಸಂಧಾನ ನಡೆದು ಅಲ್ಲಿಂದಲ್ಲಿಗೆ ಸರಿಯಾಯ್ತು ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಆದರೂ ಈ ಘಟನೆಯನ್ನು ಅಷ್ಟು ಬೇಗನೆ ತಿರಸ್ಕರಿಸುವಂತಿಲ್ಲ.
ಆ ಪ್ರಕಾರ, ಮಾರ್ಚ್ 28 ರಂದು ನಡೆದ ಬೊಬ್ಬರ್ಯ ನೇಮೋತ್ಸವದಲ್ಲಿ ಗ್ರಾಮಸ್ಥರು ಬೊಬ್ಬರ್ಯ ಕಟ್ಟೆಯ ಕಾಡಿನಲ್ಲಿ ಆಗಾಗ ಬೆಂಕಿ ಹತ್ತುತ್ತಿರುವ ವಿಷಯ ಪ್ರಸ್ತಾಪ ಮಾಡಿದರು. ಆಗ ತುಳುನಾಡ ಕಾರ್ಣಿಕದ ದೈವ ಎಂದೇ ಹೆಸರಾದ ಬೊಬ್ಬರ್ಯ, ಅಚ್ಚರಿಯ ವಿಷಯವನ್ನು ಹೇಳೆ ಬಿಟ್ಟಿತು ಅದೇನೆಂದರೆ, ದೇವಸ್ಥಾನ ಹಾಗೂ ದೇವಸ್ಥಾನ ದ ವಿಷಯವಾಗಿ ವಾಕ್ ಸಮರ ನಡೆದಿತ್ತು. ಊರಿನ ಜನರನ್ನು ಒಗ್ಗೂಡಿಸಲು ನಾನೇ ಸಂಚರಿಸಿ ಬೆಂಕಿ ಏಳುವಂತೆ ಮಾಡಿದ್ದೆ. ಜನರನ್ನು ಈ ರೀತಿಯಾಗಿ ಎಚ್ಚರಿಸಿದ್ದೇನೆ. ಇನ್ನಾದರೂ ಊರಿನ ಜನ ಒಗ್ಗಟ್ಟಾಗಿರಬೇಕು ತನ್ನ ದೇವಸ್ಥಾನದ ಕಾರ್ಯವನ್ನು ಮಾಡಬೇಕು ಎಂದು ವಾಗ್ದಾನ ನೀಡಿದೆ ಎನ್ನುತ್ತಾರೆ ಊರಜನ.
ಊರ ಜನ ತಪ್ಪು ಮರುಕಳಿಸದಂತೆ ಮೋಡಿಕೊಳ್ಳುತ್ತೇವೆ ಎಂದು ದೈವದ ಎದುರು ಕೈಜೋಡಿಸಿ ತಪ್ಪೊಪ್ಪಿಕೊಂಡಿದ್ದಾರೆ. ಈ ವಿಚಾರ ವಾಸ್ತವಕ್ಕೆ ದೂರ ಅನ್ನಿಸಿದರೂ, ನಡೆದಿದ್ದು ಸತ್ಯ. ಇದಕ್ಕೆ ಪರಿಹಾರವಾಗಿ ದೈವಸ್ಥಾನದಲ್ಲಿ ಎಳೆನೀರು ಹಾಗೂ ಹಾಲಿನ ಅಭಿಷೇಕ ಮಾಡಬೇಕು ಎಂದು ದೈವ ಹೇಳಿತ್ತು. ಅದರಂತೆ ಗ್ರಾಮಸ್ಥರೆಲ್ಲರೂ ಸೇರಿ ಧಾರ್ಮಿಕ ವಿಧಿ ವಿಧಾನ ಗಳನ್ನು ಯಾವುದೇ ಲೋಪದೋಷ ಬಾರದಂತೆ ನೆರವೇರಿಸಿದರು. ಆಶ್ಚರ್ಯವೆಂಬಂತೆ, ದೈವಕ್ಕೆ ಪ್ರಾರ್ಥನೆ ನಡೆಸಿದ ಬಳಿಕ ಎರಡು ದಿನದಲ್ಲಿ ಕಾಡಿನಲ್ಲಿ ಯಾವುದೇ ಬೆಂಕಿ ಉರಿ ಕಾಣಿಸಿ ಕೊಂಡಿಲ್ಲ
ಹೌದು, ತುಳುನಾಡ ಕಾರ್ಣಿಕದ ದೈವ ಬೊಬ್ಬರ್ಯನ ಆಟವನ್ನು ನೋಡಿ ಗ್ರಾಮಸ್ಥರು ಮಾತ್ರ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದೆ. ಕೆಲವರು ಇದು ಮೂಢನಂಬಿಕೆ ಎಂದುಕೊಂಡರೂ ನಡೆದಿದ್ದೆಲ್ಲವೂ ಸತ್ಯ. ಪ್ರಕೃತಿಯಲ್ಲಿ ಕೆಲವು ಅಚ್ಚರಿಯ ಸಂಗತಿಗಳು ಮನುಷ್ಯನ ಆಲೋಚನೆ ಮೀರಿದವು. ಎಲ್ಲಕ್ಕಿಂತ ಮಿಗಿಲಾದ ಶಕ್ತಿ ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿದೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿದೆಯೇ?