ಮೂಲ್ಕಿ,ಏ 02 (MSP): ಮಕ್ಕಳು ಆಟ ಆಡಲು ಬಳಸುವ ನಕಲಿ ನೋಟ್ ಅನ್ನು ಚಲಾಯಿಸಿ ವಸ್ತುಗಳನ್ನು ಖರೀದಿಸಲು ಪ್ರಯತ್ನ ನಡೆಸಿ ಬಾಲಕನೊಬ್ಬ ಸಿಕ್ಕಿಬಿದ್ದ ಘಟನೆ ಏ.1 ರ ಸೋಮವಾರ ಕಿನ್ನಿಗೋಳಿಯ ಮುಖ್ಯ ಪೇಟೆಯಲ್ಲಿ ನಡೆದಿದೆ.
ಕಿನ್ನಿಗೋಳಿ ಸಮೀಪದ ಗುತ್ತಕಾಡು ಕಲ್ಕರೆ ನಿವಾಸಿಯಾಗಿರುವ ಬಾಲಕ ಪ್ರಸ್ತುತ ಕಾರ್ನಾಡು ಸದಾಶಿವನಗರದ ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾನೆ. ಈತ ತನ್ನಲ್ಲಿರುವ ಆಟ ಆಡಲು ಬಳಸುವ ನೋಟನ್ನು ಮುಖ್ಯರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಚಲಾಯಿಸಲು ಪ್ರಯತ್ನಿಸಿದಾಗ, ಅಂಗಡಿ ಮಾಲೀಕರಾದ ರವಳನಾಥ ಮಲ್ಯ ಎಂಬುವರು ಸಂಶಯದಿಂದ ರೂ.200 ಮುಖಬೆಲೆಯ ಆಟಿಕೆಯ ನೋಟು ನೋಡಿ ಬಾಲಕನನ್ನು ಉಪಾಯದಿಂದ ಅಂಗಡಿ ಒಳ ಕರೆಸಿ ಹಿಡಿಯಲು ಪ್ರಯತ್ನಿಸಿದ್ದಾರೆ.
ಆದರೆ, ಬಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕೂಡಲೇ ಅಂಗಡಿ ಮಾಲೀಕರು ಬೊಬ್ಬೆ ಹಾಕಿದ್ದರಿಂದ ಸ್ಥಳೀಯರು ಬಾಲಕನನ್ನು ಹಿಡಿದು ಮೂಲ್ಕಿ ಪೂಲೀಸರಿಗೆ ಹಸ್ತಾಂತರಿಸಿದ್ದಾರೆ.
ಮಂಗಳೂರಿನಿಂದ ಖರೀದಿಸಿ ತಂದಿದ್ದ:
ಬಾಲಕನನ್ನು ಸಾರ್ವಜನಿಕರು ಹಿಡಿದು ವಿಚಾರಿಸಿದಾಗ, ‘ನಾನು ಇಂತಹ ನೋಟ್ ಅನ್ನು ಮಂಗಳೂರು ಟೋಕಿಯೋ ಬಜಾರ್ನಿಂದ 2ರೂಪಾಯಿಗೆ ಖರೀದಿಸಿದ್ದು, ಕೆಲವು ಕಡೆಗಳಲ್ಲಿ ಚಲಾಯಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾನೆ.
ಕಳೆದ ಕೆಲವು ದಿನಗಳಿಂದ ಕಿನ್ನಿಗೋಳಿಯ ಬೇರೆ ಬೇರೆ ಅಂಗಡಿಗಳಲ್ಲಿ ಇಂತಹ ನೋಟುಗಳ ಚಲಾವಣೆಗೆ ಈ ಬಾಲಕ ಮತ್ತು ಈತನ ಜೊತೆಗಿನ ಇನ್ನಿತರ ಬಾಲಕರು ಪ್ರಯತ್ನಿಸಿದ್ದು, ಅಂಗಡಿ ಮಾಲೀಕರು ಅವರಿಗೆ ಬುದ್ಧಿ ಹೇಳಿ ವಾಪಸ್ ಕಳುಹಿಸಿದ್ದಾರೆ ಎಂದು ಬಸ್ ನಿಲ್ದಾಣದ ಅಂಗಡಿ ಮಾಲೀಕರು ಈ ಸಂದರ್ಭದಲ್ಲಿ ಪೊಲೀಸರಲ್ಲಿ ತಿಳಿಸಿದ್ದಾರೆ.