ಬೆಳ್ತಂಗಡಿ, ಎ02(SS): ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಜನರ ಸೇವೆಯ ಸಂಕಲ್ಪ ಮಾಡಿರುವ ನನಗೆ ಜಿಲ್ಲೆಯ ಜನತೆಯ ಹರಕೆ ನನ್ನ ಮೇಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿಶ್ವಾಸ ವ್ಯಕ್ತಪಡಿಸಿದರು.
ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಹನುಮಾನ್ ಚಾಲೀಸ ಪಠಿಸಿ ನಂತರ ಮಾತನಾಡಿದ ಅವರು, ನಾನು ಸಾಕಷ್ಟು ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದೇನೆ. ಆದರೆ ಇದು ನನ್ನ ರಾಜಕೀಯ ಗುರುವಿನ (ಡಿ.ಕೆ ಶಿವಕುಮಾರ್) ಮುಂದೆ ಮಾಡುವ ಮೊದಲ ಭಾಷಣ. ಬೆಳ್ತಂಗಡಿಯನ್ನು ಬಿಜೆಪಿಯ ಭದ್ರಕೋಟೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಬಿಜೆಪಿಯ ಕೋಟೆ ಕಾಂಗ್ರೆಸ್ ಕೈ ಸೇರಲಿದೆ ಎಂದು ತಿಳಿಸಿದರು.
ಬೆಳ್ತಂಗಡಿಯಿಂದಲೇ ನನ್ನ ಚುನಾವಣೆಯ ಪ್ರಚಾರ ಪ್ರಾರಂಭಿಸಿದ್ದೇನೆ. ಇದು ನನ್ನ ಚುನಾವಣೆಯಲ್ಲ, ಕಾಂಗ್ರೆಸ್ ಪಕ್ಷದ ನಿಷ್ಠಾವಂತರ ಚುನಾವಣೆ. ಈ ಬಾರಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲಿದೆ. ಈ ಮೂಲಕ ಬಿಜೆಪಿಯ ಕೋಟೆ ಕಾಂಗ್ರೆಸ್ ಪಕ್ಷದ ಕೈ ಸೇರುತ್ತದೆ ಎಂದು ಹೇಳಿದರು.
ಏಪ್ರಿಲ್ 18 ರಂದು ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ಪರಿವರ್ತಿಸುವ ಬಗ್ಗೆ ಸಂಕಲ್ಪ ಮಾಡಿದ್ದೇನೆ. ಜಿಲ್ಲೆಯ ಜನರಿಗೆ ದಾರಿದೀಪವಾಗಿದ್ದ ವಿಜಯಾ ಬ್ಯಾಂಕ್ ವಿಲೀನವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ವಿಜಯಾಬ್ಯಾಂಕ್ ಉಳಿಸುವ ಸಂಕಲ್ಪವನ್ನು ನಾವು ಕೈಗೊಳ್ಳುತ್ತೇವೆ. ಅವಕಾಶ ಸಿಕ್ಕಿದ ಮೇಲೆ ನನ್ನ ಸಂಸದೀಯ ಪಟ್ಟ ಹೋದರೂ ಪರವಾಗಿಲ್ಲ, ಶತಾಯಗತಾಯ ಹೋರಾಟ ನಡೆಸಿ ವಿಜಯಾ ಬ್ಯಾಂಕ್ ಲಾಂಛನ ಮತ್ತೆ ತರುತ್ತೇನೆ ಎಂದು ಭರವಸೆ ನೀಡಿದರು.