ಸುಳ್ಯ, ಎ02(SS): ನಮ್ಮ ಸ್ವಂತ ಮಕ್ಕಳನ್ನು ನಾವು ಪ್ರೀತಿಯಿಂದ ಸಲಹುವಂತೆ ಗಿಡಮರಗಳನ್ನು ಪೋಷಿಸಬೇಕು. ಗಿಡಮರಗಳು ನಮ್ಮ ಸ್ವಂತ ಮಕ್ಕಳಿದ್ದಂತೆ ಎಂದು ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಹೇಳಿದ್ದಾರೆ.
ಬೆಳ್ಳಾರೆ ಜ್ಞಾನಗಂಗಾ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗಿಡಮರಗಳು ನಮಗೆ ಪ್ರಕೃತಿಯ ಉಡುಗೊರೆಯಾಗಿದೆ. ಮರಗಳು ಸದಾ ಮನುಷ್ಯರಿಗೆ ನೆರಳನ್ನಿಟ್ಟು ಉಪಕಾರವೇ ಮಾಡುತ್ತಿದೆ. ನಮಗೆ ಗಿಡ ಮರಗಳನ್ನು ನೆಟ್ಟು ಬೆಳೆಸಲು ಸಂಪೂರ್ಣ ಅಧಿಕಾರವಿದೆ. ಆದರೆ ಅದನ್ನು ಕಡಿದು ನಾಶಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಮನೆಗೊಬ್ಬ ಮರ ಬೆಳೆಸಿದರೆ ದೇಶಕ್ಕೆ ಅದು ಪೂರಕವಾಗುತ್ತದೆ. ನಮ್ಮ ಸ್ವಂತ ಮಕ್ಕಳನ್ನು ನಾವು ಪ್ರೀತಿಯಿಂದ ಸಲಹುವಂತೆ ಗಿಡಮರಗಳನ್ನು ಪೋಷಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಮೈಸೂರಿನ ರಂಗಾಯಣ ಸಂಸ್ಥೆಯ ಕಲಾವಿದೆ ಗೀತಾ ಮೋಂಟಡ್ಕ, ಮಕ್ಕಳನ್ನು ಅತಿಯಾದ ಶಿಸ್ತಿಗೆ ಒಳಪಡಿಸದೆ ಅವರ ಭಾವನೆ ಮತ್ತು ಕಲ್ಪನೆಗಳಿಗೆ ಬೆಲೆ ನೀಡಿ ಅರ್ಥೈಸಿಕೊಂಡು ನಡೆಯಬೇಕು. ಮಕ್ಕಳನ್ನು ಕಲಿಕಾ ಉದ್ಧೇಶದಿಂದ ಬೇಸಿಗೆ ಶಿಬಿರಗಳಿಗೆ ದಾಖಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಸಾಲುಮರದ ತಿಮ್ಮಕ್ಕ ಮತ್ತು ಗೀತಾ ಮೋಂಟಡ್ಕರವರನ್ನು ಸನ್ಮಾನಿಸಿ ಗೌರವಿಸಲಾಯಿತು.