ಮಂಗಳೂರು, ಏ 02 (MSP): ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರ ಚೌಕಿದಾರ್, ಮಹಾನ್ ಸುಳ್ಳುಗಾರ, ಪತ್ರಕರ್ತರ ಸವಾಲುಗಳನ್ನು ಎದುರಿಸುವ ತಾಕತ್ತಿಲ್ಲದ ವ್ಯಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏ.2 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ 'ಹಿಂದೂ ಟೆರರ್' ಎಂದು ಉಲ್ಲೇಖಿಸಿ ಹಿಂಸಾಕೃತ್ಯಕ್ಕೆ ಪ್ರಚೋದನೆ ನೀಡುತ್ತಾರೆ. ಹಿಂದೂತ್ವ, ಕೋಮುವಾದದ ಅಮಲನ್ನು ದೇಶದಲ್ಲಿ ಹರಡಲು ಮೋದಿ ಪ್ರಯತ್ನಿಸುತ್ತಿದ್ದು, ಮತೀಯ ಭಾವನೆಗಳ ಮೂಲಕ ಜನರನ್ನು ಕೆರಳಿಸುತ್ತಿದ್ದಾರೆ. ಈ ಮೂಲಕ ದೇಶವನ್ನು ಇಬ್ಭಾಗ ಮಾಡುವ ತಂತ್ರವನ್ನು ಪ್ರಧಾನಿ ಹುದ್ದೆಯಲ್ಲಿ ಕುಳಿತ ಮೋದಿ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಕಳೆದ ಬಾರಿ ಮೋದಿಗೆ ಜನರು ಕಣ್ಣು ಮುಚ್ಚಿ ಮತ ಹಾಕಿದ್ದರು. ಆದರೆ ಹದಿನೈದು ಲಕ್ಷ ಬಿಡಿ, ಒಂದು ರೂಪಾಯಿಯೂ ಬಡವರ ಖಾತೆಗೆ ಬರಲಿಲ್ಲ. ಇದಷ್ಟೇ ಅಲ್ಲದೆ ಅಶ್ವಾಸನೆ ನೀಡಿದ ಯಾವುದೇ ಈಡೇರಿಕೆಗಳನ್ನು ಮೋದಿ ನೇತೃತ್ವದ ಸರಕಾರ ಈವರೆಗೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಇಂದು ಅಧಿಕೃತವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಬಿಜೆಪಿಯಂತೆ ಕೇವಲ ಅಶ್ವಾಸನೆ ಮಾತ್ರ ನೀಡದೆ ಅವುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ಜನರ ಖಾತೆಗೆ 15 ಲಕ್ಷ ನಗದು ಹಾಕುವುದಾಗಿ ಹೇಳುವುದಿಲ್ಲ. ಆದರೆ ದೇಶದ ಶೇ. 20ರಷ್ಟು ಅರ್ಹ ಬಡವರಿಗೆ ಮಾಸಿಕ 6000 ರೂ.ನಂತೆ ವಾರ್ಷಿಕ 72,000 ರೂ.ಗಳನ್ನು ಹಾಕಲಿದ್ದೇವೆ ಇದು ನಮ್ಮ ಭರವಸೆ ಎಂದರು.
ಇನ್ನು ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಕರ್ನಾಟಕದಿಂದ ಸ್ಪರ್ಧಿಸುವಂತೆ ನಾವೇ ವಿನಂತಿಸಿಕೊಂಡಿದ್ದೆವು.ಅವರು ವಯನಾಡ್ ಸ್ಪರ್ಧೆಯಿಂದ ರಾಜ್ಯದ ಕಾಂಗ್ರೆಸಿಗರಿಗೆ ಸ್ವಲ್ಪ ಮಟ್ಟಿನ ಬೇಸರವಾಗಿದೆ. ಆದರೂ ಮುಂದಿನ ಪ್ರಧಾನಿ ದಕ್ಷಿಣ ಭಾರತದಿಂದ ಆಯ್ಕೆಯಾಗಿ ಹೋಗಲಿದ್ದಾರೆ ಅನ್ನೋ ಹೆಮ್ಮೆ ನಮಗಿದೆ ಎಂದರು.