ಬೆಳ್ತಂಗಡಿ, ಏ 02(SM): ಮೇ 23ರಂದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಇದೇ ವೇಳೆ ಕರ್ನಾಟಕದ ದೋಸ್ತಿ ಸರಕಾರ ಉರುಳಿ ಬೀಳಲಿದೆ. ನಮ್ಮ ಸಂಸಾರ- ಕರ್ನಾಟಕ ಸರಕಾರ ಎಂಬ ನಾಟಕ ಕಂಪೆನಿ ನಿಂತು ಹೋಗಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಥಮ ಹಂತದ ಚುನಾವಣಾ ಪ್ರಚಾರ ಅಂತಿಮ ಹಂತದಲ್ಲಿದೆ. ಇನ್ನೆರಡು ಹಂತಗಳಲ್ಲಿ ಪ್ರಚಾರ ನಡೆಯಲಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ೨ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯು ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೌಟುಂಬಿಕ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ನಡುವಿನ ಸಂಘರ್ಷವಾಗಿದೆ. ಇದು ಮಹಾಗಟಬಂಧನ ಮತ್ತು ಪ್ರಜಾಪ್ರಭುತ್ವದ ಸೊಬಗಿನ ಸಂಘರ್ಷದ ಚುನಾವಣೆಯಾಗಿದೆ ಎಂದರು.
ರಾಜ್ಯದಲ್ಲಿ ನಮ್ಮ ಸಂಸಾರ-ಕರ್ನಾಟಕ ಸರಕಾರ ಎಂಬ ನಾಟಕ ಕಂಪೆನಿ ಪರಾಕಾಷ್ಠೆಗೆ ತಲುಪಿದ್ದು ಅದಕ್ಕೆ ಅಂತಿಮ ತೆರೆ ಬೀಳಲಿದೆ. ಮೋದಿಯ ಮೇಲೆ ಅಲ್ಪಸಂಖ್ಯಾತರು ವಿಶ್ವಾಸ ವ್ಯಕ್ತಪಡಿಸಿದ್ದು ಬೆಂಬಲಿಸಲಿದ್ದಾರೆ ಎಂದು ಅವರು ಹೇಳಿದರು.
ಮಂಡ್ಯದಲ್ಲಿ ಪಕ್ಷೇತರ ಮಹಿಳೆಯನ್ನು ಎದುರಿಸಲಾಗದೆ ಮೂರು ಜನ ಸುಮಲತಾ ಎಂಬ ಹೆಸರಿನ ಮಹಿಳೆಯರನ್ನು ನಿಲ್ಲಿಸುವುದು ರಾಜಕೀಯದ ಹೇಡಿತನ ಎಂಬುದನ್ನು ಮುಖ್ಯಮಂತ್ರಿಯವರು ತೋರಿಸಿದ್ದಾರೆ. ಅಲ್ಲಿ ಏನೇ ಮಾಡಿದರು ಪ್ರಜಾಪ್ರಭುತ್ವ ಗೆದ್ದು ಸುಮಲತಾ ಆಯ್ಕೆಯಾಗಲಿದ್ದಾರೆ. ಜಾತ್ಯಾತೀತ ಪಕ್ಷದವರೆಂದು ಹೇಳಿಕೊಳ್ಳುವವರು ಸುಮಲತಾ ಗೌಡ್ತಿ ಅಲ್ಲ ಎಂದಿರುವುದು ಅಸಹ್ಯವಾಗುತ್ತದೆ ಎಂದರು.