ಕುಂದಾಪುರ, 02(SM): ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಮಂಗಳವಾರ ನಡೆದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮೈಕ್ ಕಿತ್ತು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಜಿಲ್ಲಾ ಕಾಂಗ್ರೆಸ್ನ ಮುಖಂಡ ಎಂ.ಎ. ಗಫೂರ್ ಮಾತನಾಡಲು ಆರಂಭಿಸುತ್ತಿದ್ದಂತೆ ಹಿರಿಯ ಕಾಂಗ್ರೆಸಿಗ ಅಶೋಕ್ ಶೆಟ್ಟಿ ಮೈಕ್ ಕಿತ್ತುಕೊಂಡು, ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಮಾತನಾಡಲು ನಿಮಗೆ ಆರ್ಹತೆ ಇಲ್ಲ. ನಿಷ್ಕಳಂಕವಾಗಿ ಇಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಿಮಗೆ ನಮ್ಮ ಧಿಕ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಏಕಾಏಕಿ ಸಭೆಯಲ್ಲಿ ನಡೆದ ವಿದ್ಯಮಾನದಿಂದ ಕಾರ್ಯಕರ್ತರೆಲ್ಲರು ಒಂದು ಕ್ಷಣ ಚಕಿತರಾದರು. ಸಭೆಯಲ್ಲಿ ಗಪೂರ್, ಪ್ರತಾಪ್ಚಂದ್ರಶೆಟ್ಟರ ಬಗ್ಗೆ ಮಾತನಾಡಿದ್ದಕ್ಕೆ ಈ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ. ಉಸ್ತುವಾರಿ ಸಚಿವೆ ಜಯಮಾಲಾ ಆಕ್ರೋಶಿತ ಕಾರ್ಯಕರ್ತರರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರು. ಪ್ರತಾಪಚಂದ್ರ ಶೆಟ್ಟರು ಕಾಂಗ್ರೆಸ್ನ ಹಿರಿಯ ನಾಯಕ. ಪಕ್ಷಕ್ಕೆ ಅವರ ಕೊಡುಗೆ ಅಪಾರವಾದುದು. ಅವರ ಮಾರ್ಗದರ್ಶನದಲ್ಲಿಯೇ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಪ್ರತಾಪಚಂದ್ರ ಶೆಟ್ಟರ ಬಗ್ಗೆ ನಮಗೆ ಗೌರವವಿದೆ ಎಂದು ಹೇಳುವ ಮೂಲಕ ಸಚಿವೆ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು.
ನಮಗೆ ವೇದಿಕೆಯ ಮೇಲೆ ಕುಳಿತುಕೊಳ್ಳುವವರಿಗಿಂತ ವೇದಿಕೆಯ ಮುಂದೆ ಕುಳಿತುಕೊಳ್ಳುವ ಕಾರ್ಯಕರ್ತರೆ ಮುಖ್ಯ ಎಂದ ಅವರು ಕಾರ್ಯಕರ್ತರ ಸಾಲಿನಲ್ಲಿ ಕುಳಿತುಕೊಂಡ ವುದ್ಯಾಮಾನ ಕೂಡ ನಡೆಯಿತು. ನಂತರ ಮಾತನಾಡಿದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಕೂಡಾ ಸಭಾಪತಿ ಪ್ರತಾಪಚಂದ್ರ ಶೆಟ್ಟರ ಬಗ್ಗೆಯೇ ಒತ್ತು ನೀಡಿ ಮಾತನಾಡಿದರು.