ಉಡುಪಿ,ಏ02(AZM): ಬಿಜೆಪಿಯ ನಾನೂ ಚೌಕಿದಾರ,’ಮೈ ಭೀ ಚೌಕೀದಾರ್’ಗೆ ಪ್ರತಿಯಾಗಿ ಕಾಂಗ್ರೆಸಿಗರು ನಡೆಸಿದ ‘ಚೌಕಿದಾರ್ ಚೋರ್ ಹೈ’ ಚಳವಳಿ ವೈಯಕ್ತಿಕ ಘರ್ಷಣೆಯ ಹಂತಕ್ಕೆ ತಲುಪಿದ್ದನ್ನು ಗಮನಿಸಿದ ಚುನಾವಣಾ ಆಯೋಗ ಕೊನೆಗೂ ಎರಡೂ ಪಕ್ಷಗಳ ಕಾರುಗಳ ಮೇಲೆ ಹಾಕಲಾದ ಸ್ಟಿಕ್ಕರ್ ತೆಗೆಯುವುದರ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದದ ನೇರಪ್ರಸಾರ ವ್ಯವಸ್ಥೆಯನ್ನು ಬಿಜೆಪಿ ವತಿಯಿಂದ ಚೌಕಿದಾರರ ಜತೆ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಮಾಡಲಾಗಿತ್ತು. ಈ ವೇಳೆ ಬಿಜೆಪಿ ನಾಯಕರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ತಮ್ಮ ವಾಟ್ಸ್ಯಾಪ್ ಡಿಪಿ, ಟ್ವಿಟರ್ ಸಹಿತ ವಾಹನಗಳಲ್ಲಿ 'ಮೈ ಭೀ ಚೌಕಿದಾರ್' ಘೋಷಣೆ ಹಾಕಿದ್ದರು.
ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಸ್ಛೂರ್ತಿ ಪಡೆದ ಕಾಂಗ್ರೆಸಿಗರು ತಮ್ಮ ವಾಹನಗಳಲ್ಲಿ 'ಚೌಕಿದಾರ್ ಚೋರ್ ಹೈ' ಸ್ಟಿಕ್ಕರ್ ಅಳವಡಿಸಿದ್ದು, ಬಿಜೆಪಿಗರ ಕಣ್ಣು ಕೆಂಪಗಾಗಿಸಿತ್ತು. ಮಾತ್ರವಲ್ಲ, ಕಾಂಗ್ರೆಸ್ನ 'ಚೌಕಿದಾರ್ ಚೋರ್ ಹೈ' ಚಳವಳಿ ವೈಯಕ್ತಿಕ ಘರ್ಷಣೆಯ ಹಂತಕ್ಕೆ ತಲುಪಿತ್ತು. ಕೊನೆಗೂ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಪ್ರಕರಣ ಸುಖಾಂತ್ಯಕ್ಕೆ ತಂದಿದೆ.