ಉಡುಪಿ, ಏ 02(SM): ಕಾಂಗ್ರೆಸ್ ಹೈಕಮಾಂಡ್ ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ನಿರ್ಧಾರವು ಬಿಜೆಪಿ ಅಭ್ಯರ್ಥಿ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸೋಲಿಸಲು ಪೂರಕವಾಗಿಲ್ಲ ಎಂದು ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಂಸದೆ ಶೋಭಾ ಕರಂದ್ಲಾಜೆಯ ನಿಷ್ಕ್ರಿಯತೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯತೆಯನ್ನು ಸದ್ಬಳಕೆ ಮಾಡಿಕೊಂಡು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಬದಲು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಈ ಬಗ್ಗೆ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರಿಯತೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿದ್ದೇವೆ. ಶೋಭಾ ಅವರು ಮತ್ತೆ ಗೆಲ್ಲಬಾರದು ಎಂಬ ಉದ್ದೇಶದಿಂದ ಹೋರಾಟ ಮಾಡಿದ್ದೇವೆ. ಆದರೆ ಹೈಕಮಾಂಡ್ ನಮ್ಮ ಶ್ರಮಕ್ಕೆ ಮನ್ನಣೆ ನೀಡಿಲ್ಲ. ಕ್ಷೇತ್ರ ಜೆಡಿಎಸ್ ಪಾಲಾದ ಬಳಿಕ ಜೆಡಿಎಸ್ ನಾಯಕರೇ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕಿ ಆರತಿ ಕೃಷ್ಣ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭ್ಯರ್ಥಿ ಮಾಡಲು ಪ್ರಯತ್ನ ಮಾಡಿದ್ದರು. ಆದರೆ ಅದು ಕೂಡ ಸಾಧ್ಯವಾಗಿಲ್ಲ ಎಂದು ಹೇಳಿದರು.
ಜೆಡಿಎಸ್ನಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಆಗಿದ್ದರೂ ಸಹ ಪ್ರಮೋದ್ ಮಧ್ವರಾಜ್ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಿ ಎಂದು ಹೇಳಿಲ್ಲ. ಎರಡು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಪ್ರತಿರೋಧವನ್ನು ಹೈಕಮಾಂಡ್ಗೆ ಮುಟ್ಟಿಸುವ ಪ್ರಯತ್ನ ಮಾಡಿಲ್ಲ. ಅದರ ಬದಲು ಸ್ವತಃ ತಾವೇ ಜೆಡಿಎಸ್ನಿಂದ ಟಿಕೆಟ್ ಪಡೆದುಕೊಂಡು ಬಂದು ಸ್ಪರ್ಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮೋದ್ ಗೆದ್ದರು ಅಥವಾ ಸೋತರು ಜೆಡಿಎಸ್ನಲ್ಲಿ ಇರುತ್ತಾರೆ. ಹಾಗಾದರೆ ಕಾಂಗ್ರೆಸ್ನ ಗತಿ ಏನು? ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ವಿಧಾನಸಭೆ ಚುನಾವಣೆಯಲ್ಲಿ ಸೀಟು ಬಿಟ್ಟುಕೊಡಬೇಕಾದ ಪರಿಸ್ಥಿತಿ ಬರಬಹುದು. ನಾನು ಮಾಡುವುದು ಪಕ್ಷ ವಿರೋಧಿ ಚಟುವಟಿಕೆಯಾದರೆ, ಟಿಪ್ಪು ಜಯಂತಿಗೆ ಹೋಗದೆ ಚರ್ಚ್ಗಳ ಮೇಲಿನ ದಾಳಿಗೆ ಟಿಪ್ಪು ಕಾರಣ ಎಂದು ಹೇಳುವುದು ಕೂಡ ಪಕ್ಷ ವಿರೋಧಿ ಚಟುವಟಿಕೆ ಎಂದು ಟೀಕಿಸಿದರು.