ವಿಟ್ಲ, ಎ03(SS): ಇದೇ ಎ.12ರಂದು ಕಡಲ ನಗರಿ ಮಂಗಳೂರಿಗೆ ಮೋದಿ ಆಗಮಿಸುತ್ತಿದ್ದು, ಈ ಭಾಗದ 6 ಶಕ್ತಿ ಕೇಂದ್ರದಿಂದ 16 ಸಾವಿರ ಮಂದಿ ಆಗಮಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕರೆ ನೀಡಿದ್ದಾರೆ.
ವಿಟ್ಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಗದ್ಗುರು ಭಾರತದ ಕಲ್ಪನೆಯ ಆಧಾರದಲ್ಲಿ ಆಡಳಿತ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಸುಭದ್ರವಾಗಿ ಸರಕಾರವನ್ನು ಐದು ವರ್ಷ ಆಡಳಿತ ನಡೆಸಿದ್ದಾರೆ. ಕೇಂದ್ರದಿಂದ 16,520 ಕೋಟಿ ರೂ. ಅನುದಾನ ಪಡೆದುಕೊಂಡು ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸರಕಾರಕ್ಕೆ ಯುವಕರ ಉತ್ಸಾಹ ಪೂರಕವಾಗಿದೆ. ಭ್ರಷ್ಟಾಚಾರ, ಭಯೋತ್ಪಾದನೆ ರಹಿತವಾದ ಭಾರತದ ಕನಸು ಮೋದಿಯವರ ಆಡಳಿತದಿಂದ ಸಾಕಾರಗೊಳ್ಳುತ್ತಿದೆ. ನುಡಿದಂತೆ ನಡೆದ ಮೋದಿ ಮುಂದಿನ ದಿನಗಳಲ್ಲಿ ಮತ್ತೆ ಪ್ರಧಾನಿಯಾಗಬೇಕಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಕಾರ್ಯಕರ್ತರ ಮಾತುಗಳಿಂದ ಮನೆ ಮಂದಿಯ ಮನಸ್ಸಿನಲ್ಲಿ ಪರಿವರ್ತನೆ ಸಾಧ್ಯವಿದೆ. ಯಾವುದೇ ಕಾರ್ಯದಲ್ಲಿ ಶ್ರದ್ಧೆ ಇದ್ದಾಗ ಮಾತ್ರ ಗೆಲುವು ನಿಶ್ಚಿತವಾಗಿರುತ್ತದೆ ಎಂದು ತಿಳಿಸಿದರು.