ಮಂಗಳೂರು,ಏ 03(MSP): ನಗರದಲ್ಲಿ ಎರಡು ದಿನಗಳಿಂದ ಸುಡುಬಿಸಿಲಿಗೆ ಶಾಪ ಹಾಕುತ್ತಿದ್ದ ಜನತೆ ಮಂಗಳವಾರ ತುಸು ನಿರಾಳರಾಗಿದ್ದಾರೆ ಸಂಜೆ ವೇಳೆಗೆ ಸುರಿದ ಹನಿ ಮಳೆ ಕರಾವಳಿಯನ್ನು ತಂಪಾಗಿಸಿದೆ. ಆದರೆ ಉಷ್ಟಾಂಶ ಮತ್ತೆ ಹೆಚ್ಚಾಗುವ ಸಾಧ್ಯತೆ , ಇದ್ದು ಬಿಸಿಲಿನ ಝಳಕ್ಕೆ ಸೂರ್ಯಾಘಾತವಾಗದಂತೆ ಎಚ್ಚರಿಗೆ ವಹಿಸುವುದು ಸೂಕ್ತ.
ಕಾಸರಗೋಡು ಸುತ್ತಮುತ್ತ ಬಿಸಿಲಿನ ಝಳ ಮಂಗಳವಾರವೂ ಮುಂದುವರಿದಿದ್ದು, ಇಬ್ಬರಿಗೆ ಸೂರ್ಯಾಘಾತವಾದ ವರದಿಯಾಗಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕ ಅದೂರು 17ನೇ ಮೈಲಿನ ಸಂಜೀವ ಭಂಡಾರಿ (65) ಅವರ ಬೆನ್ನಿನ ಚರ್ಮಗಳು ಸುಟ್ಟು ಹೋಗಿದ್ದು ಬಿಸಿಲಿನಿಂದ ಗುಳ್ಳೆಗಳು ಉಂಟಾಗಿದೆ.ಇದಲ್ಲದೆ ಪೈಕ ಚೆಂಡೆತ್ತೋಡು ಚಂದಂಪಾರ ಎಂಬಲ್ಲಿ ಮುಹಮ್ಮದ್ ಅಲ್ಫೈದ್ ಆಲಿ ಎಂಬ ಆರು ವರ್ಷದ ಮಗುವಿಗೆ ಬಿಸಿಲಿನಿಂದ ಸುಟ್ಟ ಗಾಯಗಳಾಗಿವೆ.ಇವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹವಾಮಾನ ಇಲಾಖೆ ಪ್ರಕಾರ ಕಳೆದ ಮಾರ್ಚ್ ತಿಂಗಳಲ್ಲಿ ದಾಖಲಾದ ಗರಿಷ್ಟ ಉಷ್ಣಾಂಶ 3702 ಡಿಗ್ರಿ ಸೆಲ್ಸಿಯಸ್ ಆದರೆ ಈ ವರ್ಷ ಅತೀ ಹೆಚ್ಚು ಉಷ್ಣಾಂಶ ಭಾನುವಾರದಂದು ಕರಾವಳಿಯಲ್ಲಿ ದಾಖಲಾಗಿದೆ. ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಅತಿಯಾದ ಬಿಸಿಲು ಮಾನವರಲ್ಲಿ ಹಲವು ವಿವಿಧ ತೊಂದರೆಗಳಿಗೆ ಕಾರಣವಾಗಬಹುದು. ನಿರ್ಜಲೀಕರಣದಿಂದ ಆಯಾಸ, ಕ್ಷೀಣತೆಯಿಂದ ತೊಡಗಿ ಸೂರ್ಯಾಘಾತದಂತಹ ಮಾರಕ ವಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಬಿಸಿಲಿನಲ್ಲಿ ಕೆಲಸ ಮಾಡುವವರು, ಕೃಷಿಕರು, ಕೂಲಿಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಕ್ರೀಡಾಳುಗಳು ಬೇಸಿಗೆಯಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಇಂತಹವರು ಎಚ್ಚರ ವಹಿಸುವುದು ಸೂಕ್ತ.
ತೀವ್ರವಾದ ಸೆಖೆಯಿಂದ ಹೆಚ್ಚಾಗಿ ಉಂಟಾಗುವ ಸಾಮಾನ್ಯ ಸಮಸ್ಯೆಯೆ ನಿರ್ಜಲೀಕರನಾ. ಇದರಿಂದ ದೇಹದಲ್ಲಿ ಬಳಲಿಕೆ ಗೋಚರಿಸುತ್ತದೆ. ದೇಹದಿಂದ ಜಲಾಂಶ ಹಾಗೂ ಸೋಡಿಯಂ ಸೇರಿದಂತೆ ಲವಣ ಗಳು ಕಡಿಮೆಯಾಗುತ್ತದೆ.ಇದಕ್ಕೆ ಪ್ರಮುಖ ಕಾರಣ ಸೂರ್ಯಾಘಾತ. ಬಿಸಿಲಿನಿಂದ ಆಂತರಿಕ ಉಷ್ಣತೆ ಹೆಚ್ಚಾಗುವಾಗ ಶರೀರದ ಉಷ್ಣತೆಯ ನಿಯಂತ್ರಣ ವ್ಯವಸ್ಥೆಯು ಹಾನಿಗೊಳಗಾಗುತ್ತದೆ. ಬಹಳ ಅಪಾಯಕಾರಿಯಾದ ಅಥವಾ ಜೀವಹಾನಿಗೊಳಗಾಗುವಂತಹ ಒಂದು ಆಘಾತವಾಗಿದೆ. ಹೀಗಾಗಿ ಅದಷ್ಟು ನೆರಳಿನಲ್ಲಿ ಕೆಲಸ ಮಾಡುವುದು, ನಿರ್ಜಲೀಕರಣ ತಡೆಯಲು ಸಾಕಷ್ಟು ನೀರು ಕುಡಿಯುವುದು ಉತ್ತಮ.