ಬೆಂಗಳೂರು, ನ 8: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರ್ನಾಟಕದ ರಾಜಕೀಯದಲ್ಲಿ ಹೊಸ ಸಂಚಲನವೊಂದು ಸೃಷ್ಟಿಯಾಗಿದೆ. ಸ್ಯಾಂಡಲ್ ವುಡ್ ನ ನಾಯಕ ನಟ – ನಿರ್ದೇಶಕ ಉಪೇಂದ್ರ ಹೊಸ ಪಕ್ಷ ಕಟ್ಟಿ ರಾಜಕೀಯದಲ್ಲಿ ಧೂಳೆಬ್ಬಿಸಲಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ತನ್ನ ಮನೋಜ್ಞ ಅಭಿನಯದ ಮೂಲಕ ಛಾಪು ಮೂಡಿಸಿದ ನಟ ಉಪೇಂದ್ರ. ಯಾರಿಗ್ ತಾನೇ ಗೊತ್ತಿಲ್ಲ ಹೇಳಿ ನಟ – ನಿರ್ದೇಶಕ ಉಪೇಂದ್ರ ಅವರ ಬಗ್ಗೆ. ತನ್ನ ವಿಭಿನ್ನ ನಟನೆಯ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿರುವ ಇವರು ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.
ಅಂದ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ಕಟ್ಟಿಕೊಂಡಿರುವ ಈ ಪಕ್ಷದ ಹೆಸರು “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ”. ಕೆಲ ದಿನಗಳ ಹಿಂದೆಯಷ್ಟೇ ನೂತನ ಪಕ್ಷದ ಅಧಿಕೃತ ಹೆಸರನ್ನು ಘೋಷಿಸುವ ಮೂಲಕ ಕರ್ನಾಟಕದ ಯುವ ಜನತೆಯ ಚಿತ್ತವನ್ನು ಬೇಗನೇ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ.
ಪ್ರತಿಯೊಂದು ವಿಷಯದಲ್ಲಿಯೂ ಡಿಫರೆಂಟ್ ಆಗಿ ಯೋಚಿಸುವ ಮತ್ತು ಎಲ್ಲರಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ವ್ಯಕ್ತಿತ್ವ ಉಪೇಂದ್ರ ಅವರದು. ಇದರಂತೆ ರಾಜ್ಯ ರಾಜಕೀಯದಲ್ಲಿ ಕೂಡ ಹೊಸತನವನ್ನು ಬಯಸಿರುವ ಉಪ್ಪಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಮೂಲಕ ಯುವಜನತೆಯ ಗಮನ ಸೆಳೆದಿದ್ದಾರೆ. ರಾಜಕೀಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಆರಂಭವಾಗಿರುವ “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ” ಇದೀಗ ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆ ತರಲಿದೆಯಾ ಅನ್ನೋದನ್ನು ಕಾದು ನೊಡಬೇಕಿದೆ.