ಕುಂದಾಪುರ, ಏ 03(MSP): ಇಲ್ಲಿನ ಸಂಸದರಿಗೆ ಸ್ವ ಪಕ್ಷೀಯರೆ ಗೋ ಬ್ಯಾಕ್ ಚಳವಳಿ ಆರಂಭಿಸಿದ್ದಾರೆ. ಸಂಸದೆ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎನ್ನುವುದು ಪ್ರಧಾನಿ ಮೋದಿಯವರ ಗಮನಕ್ಕೆ ಇದ್ದರೂ ಕೂಡಾ ಪ್ರಧಾನಿ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚಿಸದಿರುವುದು ವಿಪರ್ಯಾಸ. ಇವತ್ತು ಜಿಲ್ಲೆಯಲ್ಲಿ ಮರಳು ಸಮಸ್ಯೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಲೆದೂರಿದ್ದರೆ ಅದಕ್ಕೆ ಕಾರಣ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ನೀತಿಯೇ ಆಗಿದೆ. ಉಡುಪಿ ಜಿಲ್ಲೆಯಲ್ಲಿನ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆಯೇ ಕಾರಣ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಆರೋಪಿಸಿದರು.
ಮಂಗಳವಾರ ಕುಂದಾಪುರದ ಆರ್.ಎನ್.ಶೆಟ್ಟಿ ಮಿನಿಹಾಲ್ನಲ್ಲಿ ನಡೆದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇವತ್ತು ಏಳು ಜನ ಮೀನುಗಾರರು ಏನಾದರೂ ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಉತ್ತರ ಕೊಡುತ್ತಿಲ್ಲ. ನೇವಿಯವರೇ ಬೋಟನ್ನು ಹೊಡೆದಿದ್ದಾರೆ ಎನ್ನುವ ಸಂದೇಹ ಕಾಡುತ್ತಿದೆ. ಆವತ್ತು ಐವತ್ತು ಸಾವಿರ ಮೀನುಗಾರರು ರಸ್ತೆಗಿಳಿದು ಪ್ರತಿಭಟನೆ ಮಾಡಿದರೂ ತಲೆ ಕೆಡಿಸಿಕೊಳ್ಳದ ಸಚಿವೆ ನಿರ್ಮಲಾ ಸೀತಾರಾಮ್ ಶೋಭಾ ಕರಂದ್ಲಾಜೆಯ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಪ್ರತ್ಯಕ್ಷರಾಗುತ್ತಾರೆ ಎಂದು ಲೇವಡಿ ಮಾಡಿದರು.
ಶಾಸಕನಾಗಿದ್ದ ಸಂದರ್ಭ ೨ಸಾವಿರ ಕೋಟಿಗೂ ಮಿಕ್ಕಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಆ ಮೂಲಕ ಸರ್ಕಾರದಲ್ಲಿ ಮೂರು ಬಾರಿ ಭಡ್ತಿ ಪಡೆದಿದ್ದೇನೆ. ಇದೀಗ ನನಗೆ ಅನಿರೀಕ್ಷಿತವಾಗಿ ಸಂಸತ್ ಸ್ಥಾನಕ್ಕೆ ಅವಕಾಶ ಸಿಕ್ಕಿದೆ. ಕ್ಷೇತ್ರದ ಜನತೆ ಅವಕಾಶ ನೀಡಿದರೆ 8 ವಿಧಾನ ಸಭಾ ಕ್ಷೇತ್ರಗಳನ್ನು ಮಾದರಿಯಾಗಿ ಮಾಡುತ್ತೇನೆ ಎಂದರು.
ನಾನು ಕಾಂಗ್ರೆಸ್ಗೆ ಎಂದೂ ದ್ರೋಹ ಬಗೆದವನ್ನಲ್ಲ. ಜೆಡಿಎಸ್ನವರು ಸ್ಪರ್ಧೆಗೆ ಅವಕಾಶ ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಕಾಂಗ್ರೆಸ್ನವರು ಕೂಡಾ ಬೆಂಬಲಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ನಮ್ಮದು ಹಾಲು -ಜೇನಿನ ಮೈತ್ರಿ. ಈ ಬಾರಿ ಚುನಾವಣೆಯಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುವ ಮೂಲಕ ಮೈತ್ರಿಕೂಟವನ್ನು ಗೆಲ್ಲಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಮಾತನಾಡಿ, ನಿರಂತರವಾಗಿ ಸುಳ್ಳು ಹೇಳುತ್ತಲೆ ಬಂದಿರುವ ಕೋಮುವಾದಿ ಪಕ್ಷವನ್ನು ಸೋಲಿಸಲು ನಾವು ಒಟ್ಟಾಗಿದ್ದೇವೆ. ಐದು ವರ್ಷದ ಅವಧಿಯಲ್ಲಿ ಮೋದಿ ನೇತೃತ್ವದ ಸರ್ಕಾರ ಏನು ಮಾಡಿತು? ಯುವ ಜನತೆಗೆ ಉದ್ಯೋಗ ಕೊಡಲು ಆಗಲಿಲ್ಲ. ಯುವಜನತೆಯನ್ನು ಬಾವುಟ ಹಿಡಿಯಲು ಅಷ್ಟೆ ಬಳಸಿಕೊಂಡರು. ಕೇವಲ ಮುಖವಾಡಿ ಹಾಕಿಕೊಂಡು ಐದು ವರ್ಷ ಕಳೆದಿದ್ದಾರೆ. ಮತ್ತೆ ಐದು ವರ್ಷ ಮತದಾರರು ಮೋಸ ಹೋಗಬೇಡಿ ಎಂದರು.
ಸ್ವಾತಂತ್ರ್ಯ ನಂತರ ಕಾಂಗ್ರೆಸ್ ನೇತೃತ್ವ ಸರ್ಕಾರ ದೇಶದ ಜನತೆಗೆ ಕೊಟ್ಟಿರುವ ಕೊಡುಗೆಗಳನ್ನು, ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಹೇಳಬೇಕಾಗಿದೆ. ಮುಖವಾಡ ಹಾಕಿಕೊಂಡ ಪಕ್ಷವನ್ನು ಬೆಂಬಲಿಸಬೇಡಿ. ಬಡವರು, ಮಹಿಳೆಯರು, ಯುವಜನತೆಯ ಬಗ್ಗೆ ಚಿಂತಿಸುವ ನಮ್ಮನ್ನು ಬೆಂಬಲಿಸಿ, ಸುದೃಢ ಭಾರತದ ನಿರ್ಮಾಣಕ್ಕೆ ಪ್ರಮೋದ್ ಮದ್ವರಾಜ್ರಂತವರನ್ನು ಚುನಾಯಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಮಮತಾ ಗಟ್ಟಿ, ಎಂ.ಎ ಗಪೂರ್, ಮಲ್ಯಾಡಿ ಶಿವರಾಮ ಶೆಟ್ಟಿ, ವಾಸುದೇವ ಯಡಿಯಾಳ, ಎಂ.ಎ ಗಫೂರ್, ಮಾಣೀಗೋಪಾಲ ಮೊದಲಾದವರು ಉಪಸ್ಥಿತರಿದ್ದರು. ಕೋಣಿ ನಾರಾಯಣ ಆಚಾರ್ ಕಾರ್ಯಕ್ರಮ ನಿರ್ವಹಿಸಿ, ಬಿ.ಹಿರಿಯಣ್ಣ ವಂದಿಸಿದರು.