ಮೂಡಿಗೆರೆ, ಎ03(SS): ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು ಮತ್ತೊಮ್ಮೆ ಆಡಳಿತಕ್ಕೆ ತರಲು ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.
ಚುನಾವಣಾ ಪ್ರಚಾರದ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದೆ. ದೇಶದಲ್ಲಿ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಮಾಡಲಾರದ ಸಾಧನೆಯನ್ನು ಮೋದಿ ಸರಕಾರ 5 ವರ್ಷಗಳಲ್ಲಿ ಮಾಡಿದೆ ಎಂದು ತಿಳಿಸಿದರು.
ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಬೈರಾಪುರ, ಊರುಬಗೆಯಂತಹ ಅತೀವೃಷ್ಟಿ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಭಾರತ್ಮಾಲಾ ಯೋಜನೆಯಡಿ ಹೆದ್ದಾರಿ ನಿರ್ಮಾಣಕ್ಕೆ 7 ಸಾವಿರ ಕೋಟಿ, ಬಣಕಲ್-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಗೆ 47.ಕೋಟಿ ರೂ. ಮೀಸಲಿಡಲಾಗಿದೆ. 550 ಕೋಟಿ ಸಿಆರ್ಎಫ್ ಅನುದಾನ ತನ್ನ ಅವಧಿಯಲ್ಲಿ ತಂದಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ತಂದಿರುವ ಖ್ಯಾತಿ ಪಡೆದಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಳೆದ 5 ವರ್ಷಗಳ ಹಿಂದೆ ಯಾವುದೇ ಅಭಿವೃದ್ಧಿ ಕಾರ್ಯಗಳು ಈ ಕ್ಷೇತ್ರದಲ್ಲಿ ನಡೆದಿಲ್ಲ. ಅದರ ಹಿಂದಿನ ಅವಧಿಯಲ್ಲಿ ನಾನೇ ಶಾಸಕನಾಗಿದ್ದಾಗ ಆದಂತಹ ಕೆಲಸಗಳನ್ನು ಬಿಟ್ಟರೆ ಎಲ್ಲಾ ಅಭಿವೃದ್ಧಿ ಕಾರ್ಯಗಳೂ ಕುಸಿದಿತ್ತು. ಕಳೆದ ಒಂದು ವರ್ಷದಿಂದ ಇದನ್ನು ಸರಿದೂಗಿಸಲು ಸಾಕಷ್ಟು ಶ್ರಮಿಸಿದ್ದೇನೆ. ಅನೇಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ 4 ವರ್ಷಗಳಲ್ಲಿ ಮೂಡಿಗೆರೆಯನ್ನು ಮಾದರಿ ಕ್ಷೇತ್ರವಾಗಿಸುವುದು ನನ್ನ ಗುರಿ. ಅಭಿವೃದ್ಧಿ ಪರವಾಗಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರಿಗೆ ಮತ ನೀಡಿ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.