ಮಂಗಳೂರು ನ 8 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಬುಧವಾರ ಕರಾಳ ದಿನಾಚರಣೆ ಆಚರಿಸಲಾಯಿತು. . ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ಧರಣಿ ಕುಳಿತು ಕೇಂದ್ರ ಸರಕಾರದ ನೀತಿ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್, ಯುಪಿಎ ಸರ್ಕಾರದ ಆಡಳಿತದಲ್ಲಿ ದೇಶದಲ್ಲಿ ಜನಸಾಮಾನ್ಯರ ಸ್ಥಿತಿ ಉತ್ತಮವಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೋಟುಗಳನ್ನು ಅಮಾನ್ಯಗೊಳಿಸಿತೊ ಅಂದಿನಿಂದ ಜನರ ಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಕಿಡಿಕಾರಿದರು. ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಆದರೆ ಬಿಜೆಪಿ ಅದನ್ನು ಶೋಚನೀಯ ಸ್ಥಿತಿಗೆ ತಲುಪಿಸಿತು. ನೋಟು ಅಮಾನ್ಯ ಮಾಡಲು ಕೇಂದ್ರ ಹೊರಟಾಗ ಅನೇಕ ಕಾಂಗ್ರೇಸ್ ನೋಟಿನ ಅಪನಗದೀಕರಣದ ವಿರುದ್ದ ಮುಖಂಡರು ಸಲಹೆ ನೀಡಿದರು. ಅದರೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಪರಿಣಾಮ ದೇಶದ ಅರ್ಥಿಕ ಪರಿಸ್ಥಿತಿ ಕೆಳಮಟ್ಟಕ್ಕೆ ತಲುಪಲು ಕಾರಣವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಜೆ.ಆರ್. ಲೋಬೋ ಮಾತನಾಡಿ ನೋಟ್ ಬ್ಯಾನ್ನಿಂದಾಗಿ ಜನಸಾಮಾನ್ಯರು ಪಟ್ಟ ಕಷ್ಟಗಳನ್ನು ವಿವರಿಸಿದರು. ನೋಟ್ ಬ್ಯಾನ್ ಬಳಿಕ ಜಿಎಸ್ಟಿ ಜಾರಿಗೊಳಿಸುವ ಮೂಲಕ ಜನತೆ ಬದುಕು ಬರ್ಬರವಾಗಿದೆ ಎಂದು ವಿವರಿಸಿದರು. ಇನ್ನು ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಐವನ್ ಡಿ ಸೋಜ, ಮೇಯರ್ ಕವಿತಾ ಸನಿಲ್, ಮುಖಂಡರಾದ ಶಶಿಧರ ಹೆಗ್ಡೆ, ಲ್ಯಾನ್ಸ್ಲಾಟ್ ಪಿಂಟೋ ಮೊದಲಾದವರಿದ್ದರು.