ಮಂಗಳೂರು,ಏ 03(MSP): ಇನ್ಮುಂದೆ ಬೇಕಾಬಿಟ್ಟಿಯಾಗಿ ರಸ್ತೆ ಬದಿ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆದರೆ, ವಾಪಾಸ್ ಅದು ನಿಮ್ಮ ಮನೆ ಬಾಗಿಲಿಗೆ ಬರಬಹುದು ಎಚ್ಚರ!
ನಗರ ಸ್ವಚ್ಚವಾಗಿರಬೇಕು ಎಂದು ’ಸ್ವಚ್ಛ ಮಂಗಳೂರು ಆಭಿಯಾನದ ಕಾರ್ಯಕರ್ತರು ’ ಬಿಸಾಕಿದ ಕಸವನ್ನು ಅವರ ಮನೆ ಬಾಗಿಲಿಗೆ ತಲುಪಿಸಿ ಅರಿವು ಮೂಡಿಸುವ ಕಾರ್ಯವನ್ನು ನಗರದ ಜನರಲ್ಲಿ ಮಾಡುತ್ತಿದ್ದಾರೆ. ಇದಕ್ಕಾಗಿ ‘ಸ್ವಚ್ಛ ಯೋಧರು’ ಎಂಬ ವಾಟ್ಸಪ್ ಗ್ರೂಪ್ ಸಿದ್ಧಪಡಿಸಿಕೊಂಡಿದ್ದು, ಇವರೆಲ್ಲರೂ ಸಿಕ್ಕಿ ಸಿಕ್ಕ ಕಡೆ ಕಸ ಎಸೆಯದಂತೆ ನಗರದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಗ್ರೂಪ್ನಲ್ಲಿ 70ಕ್ಕೂ ಹೆಚ್ಚು ಜನ ಸದಸ್ಯರಿದ್ದು, ಹೆಚ್ಚಾಗಿ ಕಸ ಹಾಕುವ ಸಾರ್ವಜನಿಕ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ ಗ್ರೂಪ್ ಸದಸ್ಯರು ತಮ್ಮ ಹದ್ದಿನ ಕಣ್ಣಿಡುತ್ತಾರೆ. ಮೊದಲಿಗೆ ಕಸ ಹಾಕದಂತೆ ಅವರಿಗೆ ಬುದ್ದಿ ಹೇಳುತ್ತಾರೆ. ಒಂದು ವೇಳೆ ಮತ್ತೆ ಪುನಾರವರ್ತನೆಯಾದರೆ ಕಸ ಹಾಕಿದರೆ, ಆ ಕಸದ ರಾಶಿ ವಾಪಾಸ್ ಅವರ ಮನೆ ಬಾಗಿಲಲ್ಲಿರುತ್ತದೆ. ಇದಲ್ಲದೆ ಕಸದಲ್ಲಿ ಝೆರಾಕ್ಸ್ ಪ್ರತಿ, ಚೀಟಿಗಳು ಇಂತಹ ಮಾಹಿತಿಗಳಿದ್ದರೆ ಇದೇ ಆಧಾರದಲ್ಲಿ ಕಸ ಎಸೆದವರ ಮನೆ ಸಂಪರ್ಕಿಸಿ ಅವರ ಮನೆಗೆ ಕಸ ವಾಪಾಸ್ ತಲುಪಿಸುತ್ತಾರೆ.
ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಲು ಈ ಅಭಿಯಾನ ಪ್ರಾರಂಭಿಸಿದ್ದೇವೆ. ವಾರದಲ್ಲಿ ಒಂದು ಬಾರಿ ಶ್ರಮದಾನದಲ್ಲಿ ತೊಡಗುವ ನಾವು ಮುಂದಿನ ಒಂದು ವಾರಗಳ ಕಾಲದ ಮಾಹಿತಿಗಾಗಿ ಸ್ವಚ್ಛ ಯೋಧರು ಎಂಬ ವಾಟ್ಸಪ್ ಗ್ರೂಪ್ರಚನೆ ಮಾಡಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ನಿವೃತ್ತಿ ಹೊಂದಿದ ವ್ಯಕ್ತಿಗಳು ಕೂಡ ನಮಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ವ ಇಚ್ಚೆಯಿಂದ ಸ್ವಚ್ಚತೆಯ ಕಾರ್ಯಕರ್ತರಾಗಿ ಶ್ರಮಿಸಿ ಸ್ವಚ್ಛ ಯೋಧರಾಗಿದ್ದಾರೆ ಎನ್ನುತ್ತಾರೆ ಸ್ವಚ್ಛ ಮಂಗಳೂರು ಅಭಿಯಾನ ಸುಧೀರ್ ನೊರೊನ್ಹಾ