ಉಡುಪಿ, ಏ 03(SM): ಜಿಲ್ಲೆಯಲ್ಲಿ ವಿವಿಧ ಖಾಸಗಿ ಟಿವಿ ವಾಹಿನಿಗಳು ಹಾಗೂ ಸಾರ್ವಜನಿಕರು ಲೋಕಸಭಾ ಚುನಾವಣೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯುವ ಕಾರ್ಯಕ್ರಮ ನಡೆಸುತ್ತಿದ್ದು, ನಿಮ್ಮ ಮತ ಯಾರಿಗೆ? ಎಂದು ನೇರವಾಗಿ ಮತದಾರರನ್ನು ಪ್ರಶ್ನಿಸಿ ಅಭಿಪ್ರಾಯ ಸಂಗ್ರಹಿಸಿ ಪ್ರಸಾರ ಮಾಡುತ್ತಿದ್ದು, ಇದು ಚುನಾವಣಾ ಗೋಪ್ಯತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಅಭಿಪ್ರಾಯ ಸಂಗ್ರಹ ನಡೆಸಿದರೆ ಸಂಬಂದಪಟ್ಟ ವಾಹಿನಿ ಹಾಗೂ ಸಾರ್ವಜನಿಕರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣೆಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾರರು ತಮ್ಮ ಮತ ರಹಸ್ಯವನ್ನು ಬಯಲು ಮಾಡುವುದು ಕಳವಳಕಾರಿ. ಕೆಲವು ವಾಹಿನಿಗಳಲ್ಲಿ ಇದು ನೇರವಾಗಿ ಪ್ರಸಾರವಾಗುತ್ತಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಪ್ರತಿಯೊಬ್ಬ ಅಭ್ಯರ್ಥಿಗೂ ಸಮಾನ ಅವಕಾಶ ನೀಡಲಾಗುತ್ತಿದ್ದು, ಯಾವುದೇ ಒಬ್ಬ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಅಭಿಪ್ರಾಯ ಸಂಗ್ರಹಣೆ ಹಾಗೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವು ಖಾಸಗಿ ಕಾರ್ಯಕ್ರಮಗಳ ಅಹ್ವಾನ ಪತ್ರಿಕೆಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಅವರ ಹೆಸರನ್ನು ಯಾವುದೇ ಅನುಮತಿ ಪಡೆಯದೇ ಮುದ್ರಿಸುತ್ತಿದ್ದು, ಸದ್ರಿ ಕಾರ್ಯಕ್ರಮ ಆಯೋಜಕರ ವಿರುದ್ದ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.