ಉಡುಪಿ, ಮಾ 03(SM): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 28 ಕ್ಷೇತ್ರಗಳಿಗೂ ಭೇಟಿಕೊಟ್ಟು ಮಾಧ್ಯಮಗಳ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿ ನಮ್ಮ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುತ್ತೇವೆ. ಮೊದಲ ಹಂತದಲ್ಲಿ 14 ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಏಪ್ರಿಲ್ 7ರ ಬಳಿಕ ಬಾಕಿ ಉಳಿದಿರುವ 14 ಅಭ್ಯರ್ಥಿಗಳ ಹೆಸರನ್ನು ಘೋಷಿಸುವುದಾಗಿ ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಂತ್ರಜ್ಞಾನವನ್ನು ನಂಬಿದ್ದೇನೆ. ನಮ್ಮ ಪಕ್ಷ ವಿಭಿನ್ನವೂ ಅಲ್ಲ, ವಿಭಿನ್ನ ಪ್ರಯತ್ನವೂ ಅಲ್ಲ. ಸುಳ್ಳು, ಕಟ್ಟು ಕಥೆಯ ರಾಜಕೀಯ ವ್ಯವಸ್ಥೆಯಲ್ಲಿ ನಮಗೆ ಸತ್ಯವೂ ವಿಭಿನ್ನ ಎನ್ನಿಸುತ್ತದೆ. ಕೇವಲ ಒಂದು ದಿನದ ಮಟ್ಟಿಗೆ ಮತದಾರರ ರಾಜನಾಗುವ ಬದಲಿಗೆ 5 ವರ್ಷವೂ ಮತದಾರರ ಮಾತಿಗೆ ಬೆಲೆ ಸಿಗುವ ನೈಜ ಪ್ರಜಾಪ್ರಭುತ್ವ ಈ ದೇಶದಲ್ಲಿ ಜಾರಿಯಾಗಬೇಕು. ಇದು ನಮ್ಮ ಪಕ್ಷದ ಆಶಯವಾಗಿದ್ದು, ಈ ಗುರಿಯನ್ನು ಮುಟ್ಟುತ್ತೇವೆ ಎಂದರು.
ತೆರಿಗೆ ಪಾವತಿಸುವ ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ಸಮಾಜ ಸೇವಕರೇ. ಈ ಹಿನ್ನೆಲೆಯಲ್ಲಿ ನಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕಿದೆ. ಆ ಮೂಲಕ ರಾಜಕೀಯ ಬದಲಾಗುತ್ತದೆ. ಈಗೀನ ಆಧುನಿಕ ತಂತ್ರಜ್ಞಾನ ಬಳಸಿಕೊಂಡರೆ ಸರಕಾರದಲ್ಲಿ ಸಂಪೂರ್ಣ ಪಾರದರ್ಶಕತೆ ಸಾಧ್ಯವಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ನ್ಯಾಯಾಲಯದಲ್ಲಿ ನೊಂದಾವಣಿಯಾಗಬೇಕೆಂದು ಸಲಹೆ ನೀಡಿದರು.