ಉಪ್ಪಿನಂಗಡಿ, ಏ 04(MSP): ಕಳೆದ ತಿಂಗಳ 25 ರಂದು ನಸುಕಿನ ವೇಳೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತ್ತೊಟ್ಟಿನಲ್ಲಿ ಲಾರಿ ಚಾಲಕನನ್ನು ಕಟ್ಟಿ ಹಾಕಿ ದರೋಡೆ ಮಾಡಲಾಗಿತ್ತು ಎಂಬ ಪ್ರಕರಣದ ಹಿಂದಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ದೂರುದಾರನನ್ನೇ ಪೊಲೀಸರು ಬಂಧಿಸಿದ್ದಾರೆ. ಲಾರಿ ಚಾಲಕ, ಮಾಲೀಕನೇ ಈ ಪ್ರಕರಣದ ಪ್ರಮುಖ ರೂವಾರಿ ಆಗಿದ್ದು ಆತ ಮಾರಾಟ ಮಾಡಿದ್ದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ರಾಮೇಗೌಡ ಎಂಬವವರ ಪುತ್ರ ಅಂಬರೀಷ್. ಈತ ದರೋಡೆಗೆ ಒಳಗಾಗಿದೆ ಎಂದು ದೂರು ನೀಡಲಾಗಿದ್ದ ಲಾರಿಯ ಮಾಲೀಕ ಹಾಗೂ ಚಾಲಕ ಆಗಿದ್ದಾನೆ.
ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಹಿಂದೂಸ್ಥಾನ್ ಕಂಪನಿ ಉತ್ಪನ್ನ ಗಳನ್ನು ಸಾಗಣೆ ಮಾಡುತ್ತಿದಾಗ ಲಾರಿ ಚಾಲಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಬಾಯಿಗೆ ಬಟ್ಟೆ ತುರುಕಿ ಚಾಲಕನ್ನು ಲಾರಿ ಒಳಗಡೆಯೇ ಕಟ್ಟಿ ಹಾಕಿ ಲಾರಿಯಲ್ಲಿದ್ದ ಸೋಪು, ಸೋಪಿನ ಹುಡಿ, ಚಾ ಹುಡಿಗಳ ಪಾಕೇಟ್ ಸೇರಿದಂತೆ ರೂ 5, 200 ನಗದು ಹಾಗೂ ಮೊಬೈಲ್ ದರೋಡೆ ಮಾಡಲಾಗಿದೆ ಎಂದು ಅಂಬರೀಷ್ ದೂರು ನೀಡಿದ್ದು, ಅದರಂತೆ ಮಾರ್ಚ್ 25 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಥೆ ಹೆಣೆದು ಪೊಲೀಸರಿಗೆ ದೂರು ನೀಡಿದ್ದ. ಆರೋಪಿ, ಲಾರಿ ಚಾಲಕ ತಾನೇ ಕೃತ್ಯವನ್ನು ಎಸಗಿ, ದರೋಡೆ ಆಗಿದೆ ಎಂದು ಕಟ್ಟುಕಥೆ ಹೆಣೆದು ದೂರು ನೀಡಿದ್ದ. ಹೆದ್ದಾರಿ ದರೋಡೆ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ಪತ್ತೆ ಸಲುವಾಗಿ ಪ್ರತ್ಯೇಕ 3 ತಂಡಗಳನ್ನಾಗಿ ಮಾಡಲಾಗಿತ್ತು. ಲಾರಿ ಚಾಲಕ ನೀಡುತ್ತಿದ್ದ ಮಾಹಿತಿ ದಿನೇ ದಿನೇ ವಿಭಿನ್ನವಾಗತೊಡಗಿತು. ಆತನೇ ಬಗ್ಗೆಯೇ ಸಂಶಯ ಮೂಡಿತ್ತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಲಾರಿಯಲ್ಲಿದ್ದ ಸ್ವತ್ತುಗಳನ್ನು ನಾನೇ ತೆಗೆದು ಮಾರಿ, ಬಳಿಕ ದರೋಡೆ ಎಂದು ಸುಳ್ಳು ದೂರು ನೀಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ, ಪ್ರೊಬೆಶನರಿ ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ಪ್ರಕರಣದ ಮಾಹಿತಿ ನೀಡಿದರು.
ಮಾರ್ಚ್ 24 ರಂದು ಚಿಕ್ಕಬಳ್ಳಾಪುರದ ಹಿಂದೂಸ್ತಾನ ಲಿವರ್ ಕಂಪನಿಯಿಂದ ಸಾಬೂನು, ಶ್ಯಾಂಪು, ಟೀ ಪುಡಿ, ಕಾಫಿ ಪುಡಿ ಪಾಕೇಟ್ ಗಳನ್ನು ತನ್ನ ಬಾಬ್ತು ಲಾರಿಯಲ್ಲಿ ಲೋಡ್ ಮಾಡಿಕೊಂಡು ಪುತ್ತೂರು, ಉಜಿರೆ, ಬಂಟ್ವಾಳ, ಮಂಗಳೂರು ಕಡೆಗಳಿಗೆ ಡೆಲಿವರಿ ಮಾಡುವರೇ ಹೊರಟ್ಟಿತ್ತು.
ರಾತ್ರಿ 11-30 ಗಂಟೆಗೆ ಸಕಲೇಶಪುರ ಸಮೀಪದ ಮಾರನಹಳ್ಳಿಯಲ್ಲಿ ಊಟ ಮಾಡಿ ಮಧ್ಯ ರಾತ್ರಿ 12.30 ಗಂಟೆಗೆ ಲಾರಿಯನ್ನು ಚಲಾಯಿಸಿಕೊಂಡು ಹೊರಟು ತಡರಾತ್ರಿ ಮಾರ್ಚ್ 25 ರಂದು ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಗೋಳಿತೊಟ್ಟು ಗ್ರಾಮದ ಶಿರಡಿಗುಡ್ಡೆ ತಲುಪಿದಾಗ ಲಾರಿಯ ಹಿಂದಿನಿಂದ ಬಂದ ಇಂಡಿಕಾ ಬಿಳಿ ಬಣ್ಣದ ಕಾರು ಲಾರಿ ಓವರ್ ಟೇಕ್ ಮಾಡಿ ಕಾರನ್ನು ಲಾರಿಯ ಮುಂದೆ ಅಡ್ಡ ನಿಲ್ಲಿಸಿ ಕಾರಿನಲ್ಲಿದ್ದ ಇಬ್ಬರು ಇಳಿದು ಬಂದು ಲಾರಿ ಹತ್ತಿದ್ದರು ಎಂದು ಮಾಹಿತಿ ನೀಡಿ ಚಾಲಕ.
ಲಾರಿ ಎಡ ಮತ್ತು ಬಲದಿಂದ ಲಾರಿಯ ಕ್ಯಾಬಿನ್ಗೆ ಹತ್ತಿ ಎಡಬದಿಯಿಂದ ಹತ್ತಿದವನು ಅಂಬರೀಷ್ಗೆ ಹಲ್ಲೆ ನಡೆಸಿ, ನಂತರ ಲಾರಿಯಲ್ಲಿದ್ದ ನೈಲಾನ್ ಹಗ್ಗದಿಂದ 2 ಕಾಲು ಮತ್ತು ಕೈ ಹಿಂದಕ್ಕೆ ಕಟ್ಟಿ ಅದೇ ಹಗ್ಗದಿಂದ ಬಗ್ಗಿಸಿ ಮುಂದಿನಿಂದ ಕಾಲಿಗೆ ಕಟ್ಟಿ ಖಾರದ ಪುಡಿ ಕಣ್ಣಿಗೆ ಎರಚಿ ಚಾಲಕನ ನೈಟ್ ಪ್ಯಾಂಟಿನಲ್ಲಿದ್ದ ನಗದು ರೂ.5,200 ಹಾಗೂ ರೂ 2,000 ಮೌಲ್ಯದ ಮೊಬೈಲ್ಅನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಲಾರಿ ಚಾಲಕ ಅಂಬರೀಷ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಈತನಿಗೆ ವಿಪರೀತ ಸಾಲ ಮಾಡಿರುವುದರಿಂದಾಗಿ ಸಾಲ ತೀರಿಸುವ ಉದ್ದೇಶದಿಂದ ತನ್ನ ಲಾರಿಯಲ್ಲಿದ್ದ ಸ್ವತ್ತುಗಳನ್ನು ತೆಗೆದು ಚೆನ್ನಪಟ್ಟಣದ ಅಂಗಡಿಗೆ ಮಾರಾಟ ಮಾಡಿ, ಬಳಿಕ ಈ ಕಳ್ಳತನವನ್ನು ಮರೆ ಮಾಚಲು ತಾನೇ ಕಥೆ ಸೃಷ್ಟಿ ಮಾಡಿದ್ದ. ಆರೋಪಿ ಅಂಬರೀಷ್ ಕಳ್ಳತನ ಮಾಡಿರುವ ಸ್ವತ್ತುಗಳ ಒಟ್ಟು ಮೌಲ್ಯ ರೂ. 58,867 , ಇದನ್ನು ಮಾರಾಟ ಮಾಡಿ ತನ್ನ ವಶದಲ್ಲಿಟ್ಟುಕೊಂಡಿದ್ದ ರೂ. 51,500 ನಗದು ಹಣವನ್ನು ಸ್ವಾಧೀನಪಡಿಸಿಕೊಂಡು ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರೊಬೆಶನರಿ ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ದರೋಡೆ ಪ್ರಕರಣ ಪತ್ತೆ ಕಾರ್ಯದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾಧಿ್ಕಾರಿ ಪ್ರೊಬೆಶನರಿ ಸಹಾಯಕ ಪೊಲೀಸ್ಅಧೀಕ್ಷ ಪ್ರದೀಪ್ ಗುಂಟಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಮಂಜುನಾಥ್, ಎಸ್.ಐ. ನಂದಕುಮಾರ್, ಪ್ರೊಬೆಶನರಿ ಎಸ್.ಐ. ಪವನ್ ನಾಯಕ್, ಎಎಸ್ಐ ರುಕ್ಮ ನಾಯ್ಕ, ಸಿಬ್ಬಂದಿ ಹರಿಶ್ಚಂದ್ರ, ದೇವದಾಸ್, ಶೇಖರ್ ಗೌಡ, ಇರ್ಷಾದ್, ಜಗದೀಶ್, ಶ್ರೀಧರ್, ಮನೋಹರ್ ಭಾಗವಹಿಸಿದ್ದರು.