ಮಂಗಳೂರು, ನ 08 : ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಕೇಂದ್ರ ಸರ್ಕಾರ ತಕ್ಷಣವೇ ಶ್ವೇತಪತ್ರ ಬಿಡುಗಡೆಗೊಳಿಸಬೇಕು, ದೇಶದ ಸ್ಥಿತಿಗತಿಗಳ ಬಗ್ಗೆ ಸತ್ಯಾಸತ್ಯತೆಗಳನ್ನು ಮುಂದಿಡಬೇಕುಎಂದು ಯು.ಟಿ ಖಾದರ್ ಇಂದು ಒತ್ತಾಯಿಸಿದ್ದಾರೆ. ನ ೮ ಬುಧವಾರ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದೇಶ ಸಂಕಷ್ಟದಲ್ಲಿರುವುದಕ್ಕೆ ನರೇಂದ್ರ ಮೋದಿ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದು ಸತ್ಯ, ಮೋದಿ ಇವರೆಗೆ ಹೇಳಿದ್ದೆಲ್ಲವೂ ಸುಳ್ಳು ಎಂದು ಜನರಿಗೆ ತಿಳಿದಿದೆ. ನೋಟು ಅಮಾನ್ಯ ಮಾಡಿ ಕಪ್ಪು ಹಣ ತರುತ್ತೇವೆಂದು ಹೇಳಿ ವರ್ಷಗಳೇ ಕಳೆಯಿತು. ದೇಶದ ಜಿಡಿಪಿ ಕುಸಿತವಾಯಿತೇ ಹೊರತು ಕಪ್ಪು ಹಣ ವಶ ಯಶಸ್ವಿಯಾಗಿಲ್ಲ ಎಂದು ಕಿಡಿಕಾರಿದರು. ಹಿಂದೆಇಂದಿರಾ ಗಾಂಧಿ ಸರಕಾರದಲ್ಲಿ ಮನೆಮನೆಗೆ ಹೋಗಿ ಜನಸಮಾನ್ಯರಿಗೆ ಬೇಕಾಗಿರುವ ಸೌಲಭ್ಯ ಕೇಳಿದ್ದರು ಆದರೆ ಪ್ರಸ್ತುತ, ಬಡವರು ಅವರ ಹಣಕ್ಕಾಗಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ ಉಂಟಾಗಿದೆ ಎಂದರು.
2012-13ರಲ್ಲಿ 29,630 ಕೋಟಿ ರೂ. 2013-14ರಲ್ಲಿ 101,183 ಕೋಟಿ ರೂ ಇದು ಯುಪಿಎ ಸರ್ಕಾರದ ಅವಧಿಯಲ್ಲಿ ಪತ್ತೆಯಾದ ಕಪ್ಪು ಹಣವಾಗಿದ್ರೆ ಇನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಅಂದರೆ 2014-15ರಲ್ಲಿ 23, 108 ಕೋಟಿ ರೂ. 2015-16ರಲ್ಲಿ 20,721 ಕೋಟಿ ರೂ.2016-17ರಲ್ಲಿ 28, 211 ಕೋಟಿ ರೂ. ಕಪ್ಪು ಹಣ ಪತ್ತೆಯಾಗಿವೆ ಕೇಂದ್ರದ ಆಡಿಟ್ ವಿಭಾಗದಿಂದ ಪಡೆದುಕೊಂಡ ಮಾಹಿತಿ. ಇವುಗಳು ಸುಳ್ಳಾಗಿದ್ದಲ್ಲಿ ಕೇಂದ್ರವೇ ಸ್ಪಷ್ಟನೆ ನೀಡಲಿ. ಯುಪಿಎ ಮತ್ತು ಬಿಜೆಪಿಯ ಅವಧಿಯಲ್ಲಿ ಪತ್ತೆಯಾದ ಹಣ ತುಲನೆ ಮಾಡಿದ್ರೆ ಕಾಂಗ್ರೇಸ್ ಸರ್ಕಾರವೇ ಹೆಚ್ಚು ಕಪ್ಪು ಹಣ ಪತ್ತೆ ಮಾಡಿದೆ ಎಂದು ಮಾಹಿತಿ ನೀಡಿದರು.
ಇಂದಿರಾ ಕ್ಯಾಂಟೀನ್: ಇದೇ ವೇಳೆ ಇಂದಿರಾ ಕ್ಯಾಂಟೀನ್ ಬಗ್ಗೆ ಪ್ರಸ್ತಾಪಿಸಿದ ಅವರು ಜನವರಿಯಲ್ಲಿಯೇ ಇಂದಿರಾ ಕ್ಯಾಂಟಿನ್ ಪ್ರಾರಂಭಗೊಳ್ಳಲ್ಲಿದ್ದು ಪ್ರತೀ ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿ ಈ ಸೌಲಭ್ಯ ದೊರೆಯಲಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ೫ ಕ್ಯಾಂಟಿನ್ ತೆರೆಯಲ್ಲಿದ್ದು ಇದಲ್ಲದೆ ಜಿಲ್ಲೆಯಲ್ಲಿ ಬೆಳ್ತಂಗಡಿ , ಪುತ್ತೂರು, ಬಂಟ್ವಾಳ, ಸುಳ್ಯದಲ್ಲಿ ತಲಾ ಒಂದರಂತೆ ಕ್ಯಾಂಟೀನ್ ತೆರೆಯಲಾಗುವುದು ಎಂದರು. ಇದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕು ಹೆಡ್ ಕ್ವಾರ್ಟರ್ ಗಳಲ್ಲಿ ಸ್ಥಳೀಯಾಡಳಿತದಿಂದ ಜಾಗ ಗುರುತು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಟಿಪ್ಪು ಜಯಂತಿ: ನವೆಂಬರ್ ೧೦ ರಂದು ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು ಇದು ಸರ್ಕಾರದ ಕಾರ್ಯಕ್ರಮವಾಗಿದೆ ಹೊರತು ಮುಸ್ಲಿಂ ಸಮುದಾಯದವರದ್ದಲ್ಲ. ಟಿಪ್ಪು ಒಬ್ಬ ದೇಶಪ್ರೇಮಿಯಾಗಿದ್ದು ಆತನನ್ನು ಕೇವಲ ಅಥವಾ ಯಾವುದೇ ರಾಜರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಜಯಂತಿಗೂ ಜನರು ಸಹಕಾರ ನೀಡಬೇಕು ಎಂಡು ಇದೆ ಸಂದರ್ಭ ಮನವಿ ಮಾಡಿದರು.