ಮಂಗಳೂರು, ಎ04(SS): ಹಿಂದುತ್ವವನ್ನು ಡ್ರಗ್ಸ್ ಇದ್ದಂತೆ ಎಂದು ಹೇಳಿಕೆ ನೀಡಿದ್ದ ದಿನೇಶ್ ಗುಂಡುರಾವ್ ಹಿಂದೂಗಳಲ್ಲಿ ಕ್ಷಮೆಯಾಚಿಸಲಿ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ (ಎ03) ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ 'ಹಿಂದೂ ಟೆರರ್' ಎಂದು ಉಲ್ಲೇಖಿಸಿ ಹಿಂಸೆಯ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಹಿಂದುತ್ವ ಮತ್ತು ಕೋಮುವಾದದ ಅಮಲನ್ನು ದೇಶದಲ್ಲಿ ಹರಡಲು ಮೋದಿ ಪ್ರಯತ್ನಿಸುತ್ತಿದ್ದು, ಮತೀಯ ಭಾವನೆಗಳ ಮೂಲಕ ಜನರನ್ನು ಕೆರಳಿಸುತ್ತಿದ್ದಾರೆ. ಈ ಮೂಲಕ ದೇಶವನ್ನು ಹೊಡೆದು ಹಾಕುವ ತಂತ್ರವನ್ನು ಪ್ರಧಾನಿ ಹುದ್ದೆಯಲ್ಲಿ ಕುಳಿತ ಮೋದಿ ಮಾಡುತ್ತಿದ್ದಾರೆ. ಹಿಂದುತ್ವ ಡ್ರಗ್ಸ್ ಇದ್ದಂತೆ ಎಂದು ಹೇಳಿಕೆ ನೀಡಿದ್ದರು.
ಇದೀಗ ಈ ಹೇಳಿಕೆ ವಿರುದ್ಧ ಮಂಗಳೂರಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶರಣ್ ಪಂಪ್ವೆಲ್, ಹಿಂದುತ್ವ ಯಾರಿಗೂ ಅನ್ಯಾಯ ಮಾಡಿಲ್ಲ. ಈ ದೇಶ ಉಳಿದಿರುವುದೇ ಹಿಂದುತ್ವದಿಂದ. ಹೀಗಾಗಿ, ಹಿಂದುತ್ವ ಡ್ರಗ್ಸ್ ಎಂದು ಹೇಳಿರುವ ದಿನೇಶ್ ಗುಂಡುರಾವ್ ಹಿಂದೂಗಳಲ್ಲಿ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದ್ದಾರೆ.