ಮಂಗಳೂರು ನ 08: ನಗರದಲ್ಲಿ ಒಂಟಿ ಮನೆಗಳನ್ನು ಹಾಡು ಹಗಲೇ ದರೋಡೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತ್ ಬೈಲ್ ಬಸವನಗರದ ನಿವಾಸಿ ಪಾರ್ವತಿ( 29), ಹಾಗೂ ಕುಂಜತ್ತ್ ಬೈಲ್, ರಾಮನಗರದ ನಿವಾಸಿ ಜಯಲಕ್ಷ್ಮಿ,(27) ಇವರು ಬಂಧಿತ ಆರೋಪಿಗಳು. ಗುಜರಿ ಹೆಕ್ಕುವ ನೆಪದಲ್ಲಿ ಒಂಟಿ ಮನೆಗಳನ್ನು ಗುರುತಿಸಿ ಹಾಡು ಹಗಲೇ ಮನೆಯ ಬಾಗಿಲಿನ ಬೀಗವನ್ನು ಮುರಿದು ಬೆಲೆಬಾಳುವ ಸೊತ್ತುಗಳನ್ನು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರು. ಆರೋಪಿಗಳು ಗುಂಪಾಗಿ ಗುಜರಿ ಹೆಕ್ಕುವ ನೆಪದಲ್ಲಿ ಸುತ್ತಾಡಿಕೊಂಡು ನಂತರ ವಾಸ್ತವ್ಯವಿಲ್ಲದ ಮನೆಗಳನ್ನು ಗುರುತಿಸಿ ಈ ಕಳವು ಕೃತ್ಯವನ್ನು ನಡೆಸುತ್ತಿದ್ದರು. ಬಳಿಕ ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡವು ಇರಿಸಿ ಹಣವನ್ನು ಪಡೆದುಕೊಂಡು ಶೋಕಿ ಜೀವನ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳಿಂದ 2,46,321 ರೂ ಮೌಲ್ಯದ ಒಟ್ಟು 91.230 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಕನ್ನ ಹಾಕಿದ ಮನೆಗಳ ಮಾಹಿತಿ ಇನ್ನಷ್ಟೆ ಪತ್ತೆಹಚ್ಚಬೇಕಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. ಇಬ್ಬರು ಕಳ್ಳಿಯರ ಪೈಕಿ ಪಾರ್ವತಿ ಹಾಗೂ ಆಕೆಯ ಗಂಡನ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು .ಬಂಧಿತ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಹೆಚ್ಚಿನ ತನಿಖೆಗಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.