ಮಂಗಳೂರು,ಏ 04(MSP): ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ನರೇಂದ್ರ ಮೋದಿ. ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯಿಂದ ಅವರೇ ನಿಂತಿದ್ದಾರೆ ಎನ್ನುವ ನಂಬಿಕೆ ನಮ್ಮದು. ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಕಳೆದರೂ ಇಂದಿರಾ ಗಾಂಧಿ ಹೆಸರಿನಲ್ಲಿ ಮತ ಯಾಚಿಸುತ್ತದೆ. ಹೀಗಿರುವಾಗ ನಮ್ಮ ನಾಯಕ , ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಾವ್ಯಾಕೆ ಮತ ಯಾಚನೆ ಮಾಡಬಾರದು ? ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿಯ ಸ್ಟಾರ್ ಪ್ರಚಾರಕಿ, ವಿಧಾನ ಪರಿಷತ್ ಸದಸ್ಯೆ ತಾರಾ ವಾಗ್ದಾಳಿ ನಡೆಸಿದರು.
ಏ.04 ರ ಗುರುವಾರ ನಗರದ ಕೇಂದ್ರ ಮಾರುಕಟ್ಟೆ ಸುತ್ತಮುತ್ತ ದ.ಕ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ನಟಿ ತಾರಾ ಮತಯಾಚನೆ ಮಾಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಈಗಲೂ ಮಾತನಾಡುತ್ತದೆ, ಜೆಡಿಎಸ್ ಪಕ್ಷವೂ ’ಕುಟುಂಬ ’ದ ಬಗ್ಗೆ ಮಾತನಾಡುತ್ತದೆ ಹಾಗಾದ್ರೆ ನಾವ್ಯಾಕೆ ಮೋದಿ ಬಗ್ಗೆ ಮಾತನಾಡಬಾರದು? ಪ್ರಧಾನಿ ಮೋದಿ ದೇಶಕ್ಕಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಐದು ವರ್ಷದ ಆಡಳಿತ ಅವಧಿಯಲ್ಲಿ ಭ್ರಷ್ಟಚಾರ ರಹಿತ ಆಡಳಿತ ನೀಡಿದ್ದಾರೆ. ಹೀಗಾಗಿ ಮೋದಿ ಹೆಸರಿನಲ್ಲಿ ನಾವು ಮತ ಯಾಚಿಸುತ್ತೇವೆ ಎಂದರು.
ಬಿಜೆಪಿ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಸಾಧನೆ ಏನು ಎಂದು ಪ್ರಶ್ನಿಸುವ ಕಾಂಗ್ರೆಸ್ ಗೆ ರಾಜ್ಯದ ನಂಬರ್ ವನ್ ಶಾಸಕ ಸ್ಥಾನದಲ್ಲಿ ಹಾಗೂ ದೇಶದಲ್ಲಿಯೇ 26ನೇ ಸ್ಥಾನದಲ್ಲಿ ಸಂಸದ ನಳಿನ್ ಕುಮಾರ್ ಇದ್ದಾರೆ ಎನ್ನುವುದು ತಿಳಿದಿರಲಿ ಎಂದು ತಿರುಗೇಟು ನೀಡಿದರು. ಈ ಬಾರಿಯ ಲೋಕಸಭಾ ಚುನಾವಣೆ ದೇಶಕ್ಕಾಗಿ, ದೇಶದ ಹಿತಕ್ಕಾಗಿ, ಎಲ್ಲರಿಗೂ ಸುಭದ್ರ ಸರ್ಕಾರ ಬೇಕಾಗಿದ್ದು ಐದು ವರ್ಷ ಸಧೃಡ ಆಡಳಿತ ನೀಡಿ ಉತ್ತಮ ಕೆಲಸ ಮಾಡಿದ ಮೋದಿಯನ್ನೇ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡುವ ಇಚ್ಚೆ ಜನರಿಗಿದೆ ಎಂದರು.
ರಾಜ್ಯ ಸರ್ಕಾರ ಮೀನುಗಾರ ಕಷ್ಟಗಳಿಗೆ ಸ್ಪಂದನೆ ನೀಡುತ್ತಿಲ್ಲ. ಅವರ ಸಮಸ್ಯೆಗಳ ನಿವಾರಣೆಯತ್ತ ರಾಜ್ಯ ಸರ್ಕಾರದ ಮಂತ್ರಿಗಳು ಯಾರು ಓಲವು ತೋರುತ್ತಿಲ್ಲ ಎಂದು ದೂಷಿಸಿದ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಿಸಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದರು. ಇದೊಂದು ದೊಡ್ಡ ಗೆಲುವಾಗಿದ್ದು ಈ ಮೂಲಕ ಮೀನುಗಾರರಿಗೆ ಶಕ್ತಿ ತುಂಬುವ ಕೆಲಸವನ್ನು ಕೇಂದ್ರ ಮಾಡಿದೆ. ಪ್ರತ್ಯೇಕ ಸಚಿವಾಲಯದಿಂದ ಮೀನುಗಾರರ ಹಲವಾರು ಸಮಸ್ಯೆಗಳು ನಿವಾರಣೆಯಾಗಲಿದೆ ಎಂದರು.