ಬಂಟ್ವಾಳ, ಏ 04(SM): ಚುನಾವಣೆ ಅಂದರೆ ಗಲಾಟೆ , ಪರಸ್ಪರ ಮಾತಿನ ಭರಾಟೆ. ದಕ್ಷಿಣ ಕನ್ನಡ ಜಿಲ್ಲೆಯೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ, ಜಾತ್ರೆಯಂತಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮಾತ್ರ ಇದೀಗ ಯಾವುದೇ ಸದ್ದಿಲ್ಲದೆ ಸಪ್ಪೆಯಾಗಿದೆ. ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಗೆ ಬಂಟ್ವಾಳದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೇಸ್ ನಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಕಾರ್ಯಕರ್ತರ ಉಲ್ಲಾಸದ ನಡಿಗೆ ಕ್ಷೇತ್ರದಲ್ಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳದಲ್ಲಿದ್ದಂತಹ ಚುನಾವಣಾ ಕಾವು ಈ ಬಾರಿ ಸ್ವಲ್ಪವೂ ಗೋಚರಿಸುತ್ತಿಲ್ಲ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಎಲ್ಲೆಡೆ ಚುನಾವಣೆಯ ಗೌಜಿಗದ್ದಲ ಶುರುವಾಗಿದೆ. ಒಂದು ಕಡೆಯಿಂದ ಬಿಸಿಲಿನ ತಾಪವನ್ನು ತಡೆಯಲು ಸಾಧ್ಯವಾಗುವುದಿಲ್ಲ ಅನ್ನುವ ಕಾರಣಕ್ಕೆ ಅಥವಾ ಪಕ್ಷದ ಅಭ್ಯರ್ಥಿ ಕಾರ್ಯಕರ್ತರಿಗೆ ಒಲವು ಇಲ್ಲವೇ ಎನ್ನುವುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ. ಅಂತೂ ಎರಡು ಪಾರ್ಟಿಯ ಕಾರ್ಯಕರ್ತರ ಚಟುವಟಿಕೆಗಳು ಕಮರಿವೆ. ಚುನಾವಣೆಯ ಟ್ರೆಂಡ್ ಗಳು ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ.
ಯುವಕರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹುತೇಕ ಕಡಿಮೆಯಾಗಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಯುವಕರಲ್ಲಿ ಉತ್ತಮವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಇದೀಗ ಎಲ್ಲೂ ಕೂಡಾ ಕಾರ್ಯಕರ್ತರು ಪ್ರಚಾರಕ್ಕೆ ಹುಮ್ಮಸ್ಸು ತೋರಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇನ್ನೂ ಕೂಡಾ ಬಿಜೆಪಿ ಫೀಲ್ಡ್ ಗೆ ಇಳಿದಿಲ್ಲ. ಒಂದೆಡೆ ನಳಿನ್ ಗೆಲುವು ಖಚಿತ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿರುವ ಕಾರಣದಿಂದಾಗಿ ಬಿಜೆಪಿಗರೂ ಅಬ್ಬರದ ಪ್ರಚಾರಕ್ಕೆ ಇಳಿದಿಲ್ಲ ಎನ್ನಲಾಗಿದೆ.
ಆದರೆ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಅವರು ಮಾತ್ರ ರಾತ್ರಿ ಹಗಲು ಲೋಕಸಭಾ ಚುನಾವಣಾ ಕಣಕ್ಕೆ ಇಳಿದು ಯುವಕರ ಮನ ಪರಿವರ್ತನೆ ಮಾಡಿ ಹುರುಪು ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಕಾಂಗ್ರೇಸ್ ನ ಯುವ ನಾಯಕ ಭವಿಷ್ಯದ ತಾರೆ ಮಿಥುನ್ ರೈ ಅವರ ಸ್ಪರ್ಧೆ ಕಾಂಗ್ರೇಸ್ ನಲ್ಲಿ ಯುವಕರಿಗೆ ಹೊಸ ಚೈತನ್ಯ ತಂದಿದೆಯಾದರೂ, ಹಿರಿಯ ಕಾಂಗ್ರೇಸ್ ನ ತಲೆಗಳು ಮಾತ್ರ ತುಟಿಪಿಟಿಕ್ ಎನ್ನದೆ ಮೌನವಾಗಿ ಕುಳಿತಿರುವುದು ಕಾಂಗ್ರೆಸ್ ನಲ್ಲೂ ಚುನಾವಣೆಯ ಹುಮ್ಮಸ್ಸು ಇಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನೂ ಕೂಡಾ ಪ್ರಚಾರ ಅಥವಾ ಚುನಾವಣಾ ಕಣ ರಂಗೇರಿಲ್ಲ ಅನ್ನುವುದು ಸತ್ಯ. ಪಕ್ಷದೊಳಗಿನ ಭಿನ್ನಾಭಿಪ್ರಾಯ ಗಳನ್ನು ಸರಿಪಡಿಸಿಕೊಂಡು ಕೊನೆಯ ಕ್ಷಣದಲ್ಲಿ ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಒಟ್ಟಾಗಿ ದುಡಿಯುತ್ತಾರಾ ಅನ್ನುವುದನ್ನು ಕುತೂಹಲವಾಗಿದೆ.